ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಜೀವ ಬೆದರಿಕೆ ಆರೋಪ: ಏಮ್ಸ್ ಹೋರಾಟಗಾರರ ವಿರುದ್ಧ ದಾಖಲಾಯ್ತು FIR!

ರಾಯಚೂರು:- ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಗೆ ಜೀವ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಏಮ್ಸ್ ಹೋರಾಟಗಾರರ ವಿರುದ್ಧ FIR ದಾಖಲಾಗಿದೆ.
ರಾಯಚೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ವೀರನಗೌಡ ನೀಡಿದ್ದ ದೂರಿನ ಆಧಾರದಲ್ಲಿ ಜೋಶಿ ಹಾಗೂ ನಗರ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಏಮ್ಸ್ ಹೋರಾಟಗಾರರ ವಿರುದ್ಧ ರಾಯಚೂರು ನಗರದ ಪಶ್ಚಿಮ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ದೂರಿನ ಅನ್ವಯ ಅಶೋಕ್ ಜೈನ್, ಬಸವರಾಜ್ ಕಳಸ , ಎಂಆರ್ ಬೇರಿ, ಎಸ್ ಮಾರೆಪ್ಪ ಸೇರಿ ಆರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಜೂನ್ 24 ರಂದು ರಾಯಚೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅವರು ಎಲ್ಲೇ ಸಿಕ್ಕರೂ ಅವರಿಗೆ ಕಲ್ಲಿನಿಂದ, ಬಾರಿಗೆಯಿಂದ ಮತ್ತು ಚಪ್ಪಲಿಯಿಂದ ಹೊಡೆಯುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ.
ಆರೋಪಿಗಳ ಈ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿಯುಂಟಾಗಿ ಸೌಹಾರ್ದತೆಗೆ ಧಕ್ಕೆಯುಂಟಾಗುತ್ತದೆ. ಒಬ್ಬ ಗೌರವಾನ್ವಿತ ಕೇಂದ್ರ ಸಚಿವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವುದರಿಂದ ತಕ್ಷಣವೇ ಆರೋಪಿಗಳು ಮತ್ತು ಅವರ ಸಹಚರರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತಿದ್ದೇವೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಾಯಚೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ವೀರನಗೌಡ ಉಲ್ಲೇಖಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






