ದೇವರು ಕೇವಲ ಬಿಜೆಪಿ ಆಸ್ತಿಯಲ್ಲ, ನಾವು ಎಲ್ಲಾ ಧರ್ಮ ಕಾಪಾಡಲು ಶ್ರಮಿಸುತ್ತೇವೆ: ಡಿ.ಕೆ. ಶಿವಕುಮಾರ್

ಜುಲೈ 26, 2025 - 18:02
 0  20
ದೇವರು ಕೇವಲ ಬಿಜೆಪಿ ಆಸ್ತಿಯಲ್ಲ, ನಾವು ಎಲ್ಲಾ ಧರ್ಮ ಕಾಪಾಡಲು ಶ್ರಮಿಸುತ್ತೇವೆ: ಡಿ.ಕೆ. ಶಿವಕುಮಾರ್

ಅರಸೀಕೆರೆ: ಡಬಲ್ ಇಂಜಿನ್ ಆಡಳಿತ ಮಾಡಿದ ಬಿಜೆಪಿ ಕೊಡುಗೆ ಏನು? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಅರಸೀಕೆರೆಯಲ್ಲಿ ನಡೆದ ವಿವಿಧ ಇಲಾಖೆಗಳ ಯೋಜನೆಗಳ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಬೆಲೆ ಏರಿಕೆಯಿಂದ ತತ್ತರಿಸಿದ್ದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೆರವಾಗಲು ನಾನು, ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಚರ್ಚೆ ಮಾಡಿ ಈ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದೆವು. ಬಿಜೆಪಿ ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ.

ಧರ್ಮ, ದೇವರು ಕೇವಲ ಬಿಜೆಪಿ ಆಸ್ತಿಯಲ್ಲ. ನಾವು ಎಲ್ಲಾ ಧರ್ಮ ಕಾಪಾಡಲು ಶ್ರಮಿಸುತ್ತೇವೆ. ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸ್ ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲರಿಗೂ ಈ ಯೋಜನೆ ನೀಡಿದ್ದೇವೆ. ನಿಮ್ಮ ಮನೆಗಳಲ್ಲಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್, 2 ಸಾವಿರ ಪ್ರೋತ್ಸಾಹ ಧನ, ಉಚಿತ ಅಕ್ಕಿ, ಉಚಿತ ಬಸ್ ಪ್ರಯಾಣ, ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಇಂತಹ ಒಂದೇ ಒಂದು ಕೆಲಸವನ್ನು ನಿಮ್ಮ ಅವಧಿಯಲ್ಲಿ ಮಾಡಿದ್ದೀರಾ ಎಂದು ಬಿಜೆಪಿ ನಾಯಕರನ್ನು ಕೇಳಲು ಬಯಸುತ್ತೇನೆ. ಈ ವಿಚಾರದಲ್ಲಿ ದಳದವರನ್ನು ನಾನು ಕೇಳಲು ಹೋಗುವುದಿಲ್ಲ” ಎಂದರು.

“ಅಲ್ಲಮ ಪ್ರಭುಗಳ ಮಾತಿನಂತೆ ಕೊಟ್ಟ ಕುದುರೆ ಏರಲರಿಯದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇರೀತಿ ಅಧಿಕಾರ ಸಿಕ್ಕಾಗ ಇಂತಹ ಯೋಜನೆ ಜಾರಿ ಮಾಡಲಿಲ್ಲ. ನಿಮಗೆ ಡಬಲ್ ಇಂಜಿನ್ ಸರ್ಕಾರದ ಅಧಿಕಾರ ಸಿಕ್ಕಿತ್ತು. ಆಗ ಏನು ಮಾಡಿದ್ದೀರಿ? ಈಗ ಬಿಜೆಪಿ ಜೊತೆ ದಳದವರೂ ಸೇರಿಕೊಂಡಿದ್ದಾರೆ.

ಇವರಿಬ್ಬರು ಮಾತ್ರವಲ್ಲ, ಇವರ ಜೊತೆಗೆ ಇನ್ನೂ ನಾಲ್ಕು ಜನ ಸೇರಿಕೊಳ್ಳಲಿ, 2028ರಲ್ಲಿ ಈ ಜನಪರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಕಳೆದ ವರ್ಷ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸುಪುತ್ರ, ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರ ಪುತ್ರ ಗೆಲ್ಲಲು ಯಾಕೆ ಆಗಲಿಲ್ಲ? ಡಬಲ್ ಇಂಜಿನ್ ಸರ್ಕಾರ ಆಡಳಿತ ಮಾಡಿದವರು ಯಾಕೆ ಗೆಲ್ಲಲಿಲ್ಲ? ಈ ಗೆಲುವಿನಿಂದ ನಮ್ಮ ಸಂಖ್ಯಾಬಲ 140 ಆಗಿದೆ” ಎಂದು ತಿಳಿಸಿದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow