Darshan: ನಟ ದರ್ಶನ್ʼ​​ಗೆ ಇಂದು ಬಿಗ್ ಡೇ: ಒಂದು ಸಾಕ್ಷಿ ಮೇಲೆ ನಿಂತಿದೆ 'ದಾಸನ' ಭವಿಷ್ಯ

ಅಕ್ಟೋಬರ್ 31, 2025 - 10:49
 0  27
Darshan: ನಟ ದರ್ಶನ್ʼ​​ಗೆ ಇಂದು ಬಿಗ್ ಡೇ: ಒಂದು ಸಾಕ್ಷಿ ಮೇಲೆ ನಿಂತಿದೆ 'ದಾಸನ' ಭವಿಷ್ಯ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಗೌಡ ಸೇರಿ 17 ಮಂದಿ ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬೆಂಗಳೂರು ಸಿಸಿಎಚ್ 64ನೇ ಕೋರ್ಟ್ನಲ್ಲಿ ಇಂದು ಚಾರ್ಜ್ ಫ್ರೇಮ್ ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಆರೋಪಿಗಳು ಕಡ್ಡಾಯವಾಗಿ ಹಾಜರಾಗಬೇಕಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್, ಪವಿತ್ರಗೌಡ ಹಾಗೂ ಉಳಿದ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.

ದೋಷಾರೋಪ ನಿಗದಿಯ ವೇಳೆ, ನ್ಯಾಯಾಧೀಶರು ಪ್ರತಿ ಆರೋಪಿಯ ಹೆಸರು ಕೂಗಿ ಅವರ ವಿರುದ್ಧ ದಾಖಲಾದ ಐಪಿಸಿ ಸೆಕ್ಷನ್‌ಗಳು — 302 (ಕೊಲೆ), 364 (ಕಿಡ್ನ್ಯಾಪ್), 202 (ಸಾಕ್ಷಿ ನಾಶ) ಸೇರಿದಂತೆ ಹಲವು ವಿಧಿಗಳನ್ನು ಓದಿ ಕೇಳಿಸಲಿದ್ದಾರೆ. ಪ್ರತಿಯೊಬ್ಬ ಆರೋಪಿಯೂ “ಒಪ್ಪುತ್ತೇನೆ” ಅಥವಾ “ನಿರಾಕರಿಸುತ್ತೇನೆ” ಎಂದು ಸ್ಪಷ್ಟಪಡಿಸಬೇಕಿದೆ.

 ತಾಂತ್ರಿಕ ಸಾಕ್ಷ್ಯಗಳಿಂದ ‘ಡಿ’ ಗ್ಯಾಂಗ್‌ಗೆ ಸಂಕಷ್ಟ

ಪೊಲೀಸರು ಸಂಗ್ರಹಿಸಿರುವ ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು ಆರೋಪಿಗಳ ವಿರುದ್ಧ ಭಾರೀ ತೂಕದಂತೆ ಪರಿಣಮಿಸಿವೆ. ಕೃತ್ಯ ನಡೆದ ದಿನ ಆರೋಪಿಗಳು ಧರಿಸಿದ್ದ ಬಟ್ಟೆ, ಶೂ ಹಾಗೂ ಚಪ್ಪಲಿಗಳ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ.

ಎಫ್‌ಎಸ್‌ಎಲ್ ವರದಿ ಪ್ರಕಾರ, ದರ್ಶನ್‌ನ ಲೂಫರ್ ಶೂ, ಪವಿತ್ರಗೌಡನ ಚಪ್ಪಲಿ ಹಾಗೂ ರಾಘವೇಂದ್ರನ ಪಾದರಕ್ಷೆಗಳಲ್ಲಿ ರಕ್ತದ ಅಂಶಗಳು ಕಂಡುಬಂದಿವೆ. ಈ ಡಿಎನ್ಎ ವರದಿ ಆರೋಪಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಹಾಗೆಯೇ, ವಾಟ್ಸಪ್ ಚಾಟ್‌ಗಳು, ಸಿಡಿಆರ್‌ಗಳು (ಕಾಲ್ ಡೀಟೈಲ್ ರೆಕಾರ್ಡ್ಸ್) ಸೇರಿದಂತೆ ಸುಮಾರು 230 ಸಾಕ್ಷ್ಯಗಳು ಪ್ರಾಸಿಕ್ಯೂಷನ್ ದಾಖಲು ಮಾಡಿದ್ದು, 76 ಪ್ರಮುಖ ಸಾಕ್ಷಿಗಳು ಕೋರ್ಟ್ ಮುಂದೆ ಸಾಕ್ಷ್ಯ ನೀಡಲಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಮೂವರು ನೇರ ಸಾಕ್ಷಿದಾರರ ಹೇಳಿಕೆಗಳು ಈ ಪ್ರಕರಣದ ತಿರುಳು ಆಗಲಿವೆ. ಅವರ ಹೇಳಿಕೆಗಳೇ ಆರೋಪಿಗಳ ವಿರುದ್ಧದ ಕೇಸ್‌ನ ದಿಕ್ಕನ್ನು ತೋರಿಸಲಿವೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೋಷಾರೋಪ ನಿಗದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಕೋರ್ಟ್ ಟ್ರಯಲ್‌ಗೆ ದಿನಾಂಕ ಘೋಷಿಸುವ ಸಾಧ್ಯತೆ ಇದೆ.
ಇಂದು ನಡೆಯಲಿರುವ ವಿಚಾರಣೆ ದರ್ಶನ್ ಮತ್ತು ಇತರ ಆರೋಪಿಗಳಿಗಾಗಿ ಟರ್ನಿಂಗ್ ಪಾಯಿಂಟ್ ಆಗಬಹುದೆಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow