ದರ್ಶನ್ʼಗೆ ಮತ್ತೆ ಕಾಡ್ತಿದೆ ಬೆನ್ನು ನೋವು; ಚಿಕಿತ್ಸೆಗೆ ಮನವಿ ಮಾಡಿದ ನಟ
ಬೆಂಗಳೂರು: ನಟ ದರ್ಶನ್ ಅವರು ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಬಗ್ಗೆ ಮತ್ತೆ ಸುದ್ದಿಯಾಗಿದೆ. ಜೈಲಿನಲ್ಲಿ ಇದ್ದು, ಕಳೆದ ಒಂದು ವಾರದಿಂದ ಬೆನ್ನುನೋವು ಹೆಚ್ಚಾಗಿ ಕಾಡುತ್ತಿದ್ದು, ಅವರು ಕುಂಟುತ್ತಲೇ ನಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಜೈಲಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಚಿಕಿತ್ಸೆಗೆ ವಿನಂತಿಸಿದ್ದಾರೆ.
ದರ್ಶನ್ ಅವರು ಇದಕ್ಕೂ ಮೊದಲು ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ವೈದ್ಯರು ಶಸ್ತ್ರಚಿಕಿತ್ಸೆ ಸಲಹೆ ನೀಡಿದ್ದರಿಂದ ಅವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಆದರೆ, ಶೂಟಿಂಗ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಕಾರಣ ಆಪರೇಷನ್ ಮಾಡಿಸಿಕೊಳ್ಳಲಾಗಿಲ್ಲ.
ಜೈಲಾಧಿಕಾರಿಗಳು ದರ್ಶನ್ ಮನವಿಯ ಮೇರೆಗೆ ಸಿವಿ ರಾಮನ್ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಕಳುಹಿಸಿದ್ದರು. ವೈದ್ಯರು ತಪಾಸಣೆ ನಡೆಸಿ ಫಿಜಿಯೋಥೆರಪಿಯ ಅಗತ್ಯವಿದೆ ಎಂದು ಸೂಚಿಸಿದ್ದಾರೆ. ಪ್ರಸ್ತುತ ವಾರದಲ್ಲಿ ಎರಡು ಬಾರಿ ಮಾತ್ರ ಫಿಜಿಯೋಥೆರಪಿ ನೀಡಲಾಗುತ್ತಿದೆ.
ಇದೆ ಸಂದರ್ಭದಲ್ಲಿ, ದರ್ಶನ್ ಮೊಣಕೈ ನೋವು ಕೂಡ ತೀವ್ರವಾಗಿದೆ. ಕಾರು ಅಪಘಾತದ ಸಂದರ್ಭದಲ್ಲಿ ಮೊಣಕೈಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ವೇಳೆ ಕೈಗೆ ರಾಡ್ ಹಾಕಲಾಗಿದೆ. ಇದೀಗ ಆ ಭಾಗದಲ್ಲಿ ನೋವು ಹೆಚ್ಚಿದ್ದು, ಎರಡು ಬೆರಳುಗಳು ಮರಗಟ್ಟಿರುವುದಾಗಿ ವರದಿಯಾಗಿದೆ.
ದರ್ಶನ್ ಹಾಸಿಗೆ ಮತ್ತು ದಿಂಬಿನ ಅಗತ್ಯವಿದೆ ಎಂದು ಅಲವತ್ತು ವ್ಯಕ್ತಪಡಿಸಿದ್ದಾರೆ. ಈಗ ನೆಲದ ಮೇಲೆ ಮಲಗುತ್ತಿರುವ ಕಾರಣ ಶೀತದಿಂದ ಬೆನ್ನು ನೋವು ಇನ್ನಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮೊಣಕೈ ಸಮಸ್ಯೆಗೂ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿದು ಬಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?