ದರ್ಶನ್ ಕಾಲಿನಲ್ಲಿ ಫಂಗಸ್ ಆಗಿದೆ ಅನ್ನೋದು ಸುಳ್ಳು: ಪ್ರಾಧಿಕಾರ ವರದಿಯಲ್ಲಿ ಬಯಲು.!
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಕಾನೂನು ಸೇವಾ ಪ್ರಾಧಿಕಾರವು 57ನೇ ಸೆಷನ್ಸ್ ನ್ಯಾಯಾಲಯಕ್ಕೆ ರಹಸ್ಯ ವರದಿಯೊಂದನ್ನು ಸಲ್ಲಿಸಿದೆ. ನ್ಯಾಯಮೂರ್ತಿ ವರದರಾಜ್ ನೇತೃತ್ವದ ತಂಡವು ಜೈಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಈ ವರದಿಯನ್ನು ಸಿದ್ಧಪಡಿಸಿದ್ದು, ಇದು ದರ್ಶನ್‌ರ ಜೈಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.
ದರ್ಶನ್ ಇದ್ದಿರುವ ಬ್ಯಾರಕ್‌ನಲ್ಲಿ ಒಂದು ಭಾರತೀಯ ಶೈಲಿಯ ಹಾಗೂ ಒಂದು ವಿದೇಶಿ ಶೈಲಿಯ ಟಾಯ್ಲೆಟ್ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಸಿಗೆ, ದಿಂಬು ನೀಡಿಲ್ಲವೆಂಬ ದೂರು ಕುರಿತು, ವಿಚಾರಣಾಧೀನ ಕೈದಿಗಳಿಗೆ ಹೆಚ್ಚುವರಿ ಹಾಸಿಗೆ ಅಥವಾ ದಿಂಬು ನೀಡುವ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಬಿಸಿಲಿನಲ್ಲಿ ಓಡಾಡಲು ಬಿಡುತ್ತಿಲ್ಲ ಎಂಬ ಆರೋಪಕ್ಕೂ ಸ್ಪಷ್ಟನೆ ನೀಡಲಾಗಿದ್ದು, ನಿಯಮದ ಪ್ರಕಾರ ಪ್ರತಿದಿನ ಒಂದು ಗಂಟೆ ವಾಕಿಂಗ್ ಮತ್ತು ಆಟವಾಡಲು ಅವಕಾಶ ನೀಡಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ದರ್ಶನ್ ಸೆಲೆಬ್ರಿಟಿಯಾಗಿರುವುದರಿಂದ ಅವರು ಹೆಚ್ಚು ಓಡಾಡಿದರೆ ಇತರೆ ಕೈದಿಗಳು ಕಿರುಚುವುದು, ಅಕ್ಕಪಕ್ಕದ ಅಪಾರ್ಟ್‌ಮೆಂಟ್ ಗಳಿಂದ ಫೋಟೋ ತೆಗೆಯುವಂತಹ ಘಟನೆಗಳು ನಡೆಯುತ್ತವೆ ಎಂದು ಜೈಲು ಅಧಿಕಾರಿಗಳು ವರದಿಯಲ್ಲಿ ಹೇಳಿದ್ದಾರೆ.
ದರ್ಶನ್ ಅವರಿಗೆ ಟಿವಿ ನೀಡಿಲ್ಲವೆಂಬ ದೂರುಗೂ ಸ್ಪಷ್ಟನೆ ದೊರೆತಿದ್ದು, ಕೈದಿಗಳಿಗೆ ಟಿವಿ ನೋಡಲು ಅವಕಾಶ ಇದೆ ಆದರೆ ಪ್ರತಿ ಬ್ಯಾರಕ್‌ಗೆ ಪ್ರತ್ಯೇಕ ಟಿವಿ ನೀಡಬೇಕೆಂಬ ನಿಯಮವಿಲ್ಲ ಎಂದು ವರದಿ ಹೇಳುತ್ತದೆ. ಫೋನ್‌ನಲ್ಲಿ ಮಾತನಾಡುವಾಗ ಸ್ಪೀಕರ್ ಆನ್ ಮಾಡಿಸುತ್ತಾರೆ ಎಂಬ ದೂರು ಕುರಿತು, ಆರೋಪಿಗಳ ಮಾತುಗಳನ್ನು ನಿಗಾ ಇಡುವ ಉದ್ದೇಶದಿಂದ ಸ್ಪೀಕರ್ ಆನ್ ಮಾಡಲಾಗುತ್ತದೆ. ಫೋನ್ ಕಾಲ್‌ಗಳನ್ನು ರೆಕಾರ್ಡ್ ಮಾಡುವ ಹಕ್ಕು ಜೈಲು ಅಧಿಕಾರಿಗಳಿಗೆ ಇದೆ ಎಂಬುದೂ ವರದಿಯಲ್ಲಿ ಉಲ್ಲೇಖವಾಗಿದೆ.
ದರ್ಶನ್ ಕಾಲಿಗೆ ಫಂಗಸ್ ಬಂದಿದೆ ಎಂಬ ಆರೋಪಕ್ಕೂ ಸ್ಪಷ್ಟನೆ ನೀಡಲಾಗಿದ್ದು, ಚರ್ಮರೋಗ ತಜ್ಞೆ ಡಾ. ಜ್ಯೋತಿ ಬಾಯಿ ಅವರು ಪರೀಕ್ಷೆ ನಡೆಸಿ, ದರ್ಶನ್ ಅವರ ಹಿಮ್ಮಡಿ ತುಸು ಒಡೆದಿದೆ ಆದರೆ ಫಂಗಸ್ ಇಲ್ಲ ಎಂದು ತಿಳಿಸಿದ್ದಾರೆ. ಜೈಲು ವೈದ್ಯಾಧಿಕಾರಿಗಳು ಎರಡು ದಿನಕ್ಕೊಮ್ಮೆ ಬ್ಯಾರಕ್‌ಗೆ ಭೇಟಿ ನೀಡುತ್ತಿದ್ದಾರೆ ಹಾಗೂ ದರ್ಶನ್‌ಗೆ ಫಿಸಿಯೋಥೆರಪಿ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ಸೊಳ್ಳೆ ಬತ್ತಿ, ಕನ್ನಡಿ, ಬಾಚಣಿಕೆ ನೀಡಿಲ್ಲ ಎಂಬ ಆರೋಪಕ್ಕೂ ಉತ್ತರ ನೀಡಲಾಗಿದ್ದು, ಈ ವಸ್ತುಗಳು ಶಿಕ್ಷಿತ ಕೈದಿಗಳಿಗೆ ಮಾತ್ರ ನೀಡಲಾಗುತ್ತವೆ. ವಿಚಾರಣಾಧೀನ ಕೈದಿಗಳಿಗೆ ನೀಡುವ ನಿಯಮವಿಲ್ಲ.ದರ್ಶನ್ ಬ್ಯಾರಕ್ ಬಳಿ ರಾತ್ರಿ ಇಡೀ ಲೈಟ್ ಇಡಲಾಗಿದೆ ಎಂಬ ದೂರುಗೂ ಭದ್ರತೆ ದೃಷ್ಟಿಯಿಂದ ಆ ಬೆಳಕು ಇರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?