AUS vs IND: 2ನೇ ಪಂದ್ಯ ಹೀನಾಯವಾಗಿ ಸೋತ ಸೂರ್ಯ ಪಡೆ..! ದಾಖಲೆ ಮುರಿದ ಅಭಿಷೇಕ್ ಶರ್ಮಾ
ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲನುಭವಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ ಬೌಲರ್ಸ್, ಭಾರತೀಯ ಬ್ಯಾಟರ್ಸ್‌ಗೆ ಆರಂಭದಿಂದಲೇ ಕಠಿಣ ಸವಾಲು ಎಸೆದರು. ಬೃಹತ್ ಸ್ಕೋರ್ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ 2.4 ಓವರ್‌ಗಳಲ್ಲೇ 20 ರನ್‌ಗಳಿಗೇ ಶುಭ್‌ಮನ್ ಗಿಲ್ ವಿಕೆಟ್ ಕಳೆದುಕೊಂಡಿತು (5).
ನಂತರ ಬಂದ ವಿಕೆಟ್‌ಕೀಪರ್ ಸ್ಯಾಮ್ಸನ್ ಕೇವಲ 2 ರನ್ ಮಾಡಿ ಪೆವಿಲಿಯನ್ ಸೇರಿದರು. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 1 ರನ್‌ಗೇ ಔಟ್ ಆದರು. ತಿಲಕ್ ವರ್ಮಾ, ಕುಲ್ದೀಪ್ ಯಾದವ್ ಮತ್ತು ಬುಮ್ರಾ ಖಾತೆ ತೆರೆಯದೇ ವಾಪಸ್ ಹೋದರು.
ಒಟ್ಟಾರೆ ಟೀಂ ಇಂಡಿಯಾದ ಬ್ಯಾಟಿಂಗ್ ಸಂಪೂರ್ಣ ಕುಸಿತ ಕಂಡರೂ, ಅಭಿಷೇಕ್ ಶರ್ಮಾ ಮತ್ತು ಹರ್ಷಿತ್ ರಾಣಾ ಮಾತ್ರ ಧೈರ್ಯದಿಂದ ಎದುರಿಸಿದರು. ವಿಕೆಟ್‌ಗಳ ಪತನದ ನಡುವೆ ಅಭಿಷೇಕ್ ಶರ್ಮಾ 183.78 ಸ್ಟ್ರೈಕ್ ರೇಟ್‌ನಲ್ಲಿ 68 ರನ್‌ಗಳು (8 ಬೌಂಡರಿ, 2 ಸಿಕ್ಸರ್) ಬಾರಿಸಿ ಮಾನ ಉಳಿಸಿದರು. ಹರ್ಷಿತ್ ರಾಣಾ 33 ಎಸೆತಗಳಲ್ಲಿ 35 ರನ್‌ಗಳು (1 ಸಿಕ್ಸರ್, 3 ಬೌಂಡರಿ) ಬಾರಿಸಿದರು.ಟೀಂ ಇಂಡಿಯಾ 18.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 125 ರನ್‌ಗಳಿಸಿತು.
ಆಸ್ಟ್ರೇಲಿಯಾ ಬೌಲರ್ಸ್ ವಿರುದ್ಧ ಅಭಿಷೇಕ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತ ತಂಡದ ಪರ ಭರ್ಜರಿ ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ ದಾಖಲೆ ಮಾಡಿದರು. ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನಾಲ್ಕು ವರ್ಷಗಳಲ್ಲಿ ಸಾಧಿಸಿದ್ದನ್ನು ಅಭಿಷೇಕ್ ಶರ್ಮಾ ಒಂದೇ ವರ್ಷದಲ್ಲಿ ಮಾಡಿ ತೋರಿಸಿದ್ದಾರೆ.
ಆಸ್ಟ್ರೇಲಿಯಾ ಪರ ಬ್ಯಾಟಿಂಗ್‌ನಲ್ಲಿ ಮಿಚೆಲ್ ಮಾರ್ಷ್ (46), ಟ್ರಾವಿಸ್ ಹೆಡ್ (28), ಮತ್ತು ಜೋಶ್ ಇಂಗ್ಲಿಷ್ (20) ಪ್ರಮುಖ ಕೊಡುಗೆ ನೀಡಿದರು. 126 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ತಲುಪಿತು. ಭಾರತ ಪರ ಬುಮ್ರಾ, ಕುಲ್ದೀಪ್ ಯಾದವ್ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರು. ಈ ಗೆಲುವಿನಿಂದ ಆಸ್ಟ್ರೇಲಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?