ಹಾಸಿಗೆ, ದಿಂಬು ಕೋರಿ ಅರ್ಜಿ: ದರ್ಶನ್ ಮನವಿಗೆ 'ನೋ' ಎಂದ ಕೋರ್ಟ್! ಜೈಲಾಧಿಕಾರಿಗಳಿಗೆ ಖಡಕ್ ಸೂಚನೆ

ಅಕ್ಟೋಬರ್ 29, 2025 - 14:02
 0  18
ಹಾಸಿಗೆ, ದಿಂಬು ಕೋರಿ ಅರ್ಜಿ: ದರ್ಶನ್ ಮನವಿಗೆ 'ನೋ' ಎಂದ ಕೋರ್ಟ್! ಜೈಲಾಧಿಕಾರಿಗಳಿಗೆ ಖಡಕ್ ಸೂಚನೆ

ಜೈಲಿನಲ್ಲಿ ಹಾಸಿಗೆ ಮತ್ತು ದಿಂಬಿನ ಸೌಲಭ್ಯ ಕೋರಿದ್ದ ನಟ ದರ್ಶನ್‌ಗೆ ನ್ಯಾಯಾಲಯದಲ್ಲಿ ನಿರಾಸೆಯಾಗಿದೆ. ವಿಶೇಷ ಸೌಲಭ್ಯ ನೀಡಲು ನಿರಾಕರಿಸಿದ ಸೆಷನ್ಸ್ ಕೋರ್ಟ್, ಜೈಲಿನ ನಿಯಮಗಳ ಪಾಲನೆಗೆ ಸೂಚಿಸಿದ್ದು, ಇದು ದರ್ಶನ್‌ಗೆ ಭಾರೀ ಹಿನ್ನಡೆಯಾಗಿದೆ. ಹೌದು ನಟ ದರ್ಶನ್, ಜೈಲಿನಲ್ಲಿ ಹಾಸಿಗೆ, ತಲೆ ದಿಂಬು, ಬೆಡ್ ಶೀಟ್ ನೀಡಬೇಕು. ಜೈಲಿನಲ್ಲಿ ವಾಕಿಂಗ್ ಮಾಡಲು ಅವಕಾಶ ನೀಡಬೇಕು  ಎನ್ನುವುದು ಸೇರಿದಂತೆ ಇತರೆ ಮೂಲಸೌಕರ್ಯ ನೀಡಿಕೆ ಕೋರಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಬೆಂಗಳೂರಿನ 57 ಸಿಸಿಎಚ್ ಕೋರ್ಟ್ ಆದೇಶ ನೀಡಿದೆ. 

ದರ್ಶನ್ ಅವರಿಗೆ ತಿಂಗಳಿಗೊಮ್ಮೆ ಹಾಸಿಗೆ, ಬಟ್ಟೆಗಳನ್ನು ಒದಗಿಸುವಂತೆ ನ್ಯಾಯಾಲಯ ಆದೇಶಿಸಿದೆ. ಮತ್ತೊಬ್ಬ ಆರೋಪಿ ಪವಿತ್ರಾ ಅವರಿಗೂ ಇದೇ ಆದೇಶ ಅನ್ವಯ ಆಗಲಿದೆ.  ಆದರೆ ದರ್ಶನ್ ಕೇಳಿದಂತೆ ದಿಂಬು, ಕನ್ನಡಿ, ಬಾಚಣಿಗೆ ಹಾಗೂ ಇನ್ನಿತರೆ ಸೌಲಭ್ಯಗಳು ಅವರಿಗೆ ಸಿಕ್ಕಿಲ್ಲ.

ಈ ಹಿಂದೆ ದರ್ಶನ್ ಹಾಗೂ ಇತರೆ ಆರೋಪಿಗಳ ಜಾಮೀನು ರದ್ದು ಮಾಡಿದ್ದ ಸುಪ್ರೀಂಕೋರ್ಟ್, ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ವಿಶೇಷ ಸೌಲಭ್ಯ ನೀಡದಂತೆ ಸೂಚಿಸಿತ್ತು. ಅದರಂತೆ ಜೈಲಧಿಕಾರಿಗಳು ದರ್ಶನ್​​ಗೆ ಯಾವುದೇ ಸೌಲಭ್ಯಗಳನ್ನು ನೀಡಿರಲಿಲ್ಲ. ಹಾಗಾಗಿ ದರ್ಶನ್ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದ ಈಗಿನ ಆದೇಶದಿಂದ ದರ್ಶನ್​​ಗೆ ಪೂರ್ಣ ಸಂತುಷ್ಟಿ ಸಿಕ್ಕಂತಿಲ್ಲ.

ತಮ್ಮನ್ನು ಬೇರೆ ಬ್ಯಾರಕ್​ಗೆ ಸಹ ಸ್ಥಳಾಂತರ ಮಾಡುವಂತೆಯೂ ಸಹ ದರ್ಶನ್ ಕೇಳಿಕೊಂಡಿದ್ದರು. ಆದರೆ ಈ ಅಧಿಕಾರವನ್ನು ಜೈಲಧಿಕಾರಿಗಳಿಗೆ ನ್ಯಾಯಾಲಯ ನೀಡಿದೆ. ದರ್ಶನ್ ಅನ್ನು ಬೇರೆ ಬ್ಯಾರಕ್​​ಗೆ ಸ್ಥಳಾಂತರಿಸುವ ನಿರ್ಣಯವನ್ನು ಜೈಲಧಿಕಾರಿಗಳು ಕೈಗೊಳ್ಳಲಿ ಎಂದಿದೆ ನ್ಯಾಯಾಲಯ.

ದರ್ಶನ್ ಅವರು ಈಗಿರುವ ಬ್ಯಾರಕ್​​ನಲ್ಲಿ ಬೆಳಕು ಬರುವುದಿಲ್ಲ. ಬಿಸಿಲು ಕಾಣದೆ ಫಂಗಸ್ ಆಗಿದೆ ಎಂದು ಆರೋಪಿಸಿದ್ದರು. ಆದರೆ ದರ್ಶನ್ ಭದ್ರತೆ ದೃಷ್ಟಿಯಿಂದ ಬೇರೆ ಬ್ಯಾರಕ್​​ಗೆ ಅವರನ್ನು ಸ್ಥಳಾಂತರ ಮಾಡಿಲ್ಲ ಎಂದು ಜೈಲಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.

A1 ಪವಿತ್ರಾಗೌಡ, A2 ದರ್ಶನ್ ಸೇರಿ 6 ಆರೋಪಿಗಳು ಇಂದಿನ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಶೀಘ್ರ ಸಾಕ್ಷ್ಯ ವಿಚಾರಣೆ ಕೋರಿ ಪ್ರಾಸಿಕ್ಯೂಷನ್ ಹಾಕಲಾಗಿದ್ದ ಅರ್ಜಿಯ ಬಗ್ಗೆ, ಸಾಕ್ಷ್ಯ ವಿಚಾರಣೆಗೆ 2 ಕಡೆಯವರು ಸಹಕರಿಸುವಂತೆ ಕೋರ್ಟ್ ಸೂಚನೆ ನೀಡಿತು. ಇದರ ಜೊತೆಗೆ ತಮ್ಮನ್ನು ಆರೋಪದಿಂದ ಕೈಬಿಡುವಂತೆ ಐದನೇ ಆರೋಪಿ ನಂದೀಶ್ ಅರ್ಜಿ ಹಾಕಿದ್ದ, ಆದರೆ ಆ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow