ರೇಣುಕಾ ಸ್ವಾಮಿ ಕೇಸ್: ಕೊ*ಲೆ ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಪ್ರದೋಶ್ (14ನೇ ಆರೋಪಿ) ಅವರಿಗೆ ನ್ಯಾಯಾಲಯವು 20 ದಿನಗಳ ಮಧ್ಯಂತರ ಜಾಮೀನು ಮಂಜೂರಿಸಿದೆ. ಪ್ರದೋಶ್ ಅವರ ತಂದೆ ಸುಬ್ಬಾರಾವ್ ಇತ್ತೀಚೆಗಷ್ಟೇ ನಿಧನ ಹೊಂದಿರುವುದರಿಂದ, ಅವರ ಉತ್ತರಾಧಿಕ ಕ್ರಿಯೆಗಳನ್ನು ನೆರವೇರಿಸಲು ಮಾನವೀಯ ನೆಲೆಯಲ್ಲಿ ಈ ಜಾಮೀನು ನೀಡಲಾಗಿದೆ.
ಪ್ರದೋಶ್ ಅವರ ಪರವಾಗಿ ಬೆಂಗಳೂರು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯವು ವಿಚಾರಣೆ ಬಳಿಕ ಮಾತ್ರ 20 ದಿನಗಳ ಕಾಲ ಜಾಮೀನು ನೀಡುವ ನಿರ್ಧಾರ ಕೈಗೊಂಡಿದೆ. ಕೆಲ ದಿನಗಳ ಹಿಂದೆ ಪ್ರದೋಶ್ ಅವರ ಅಜ್ಜಿ ಸಹ ನಿಧನ ಹೊಂದಿದ್ದರು ಎಂದು ತಿಳಿದುಬಂದಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈ ವರ್ಷ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಿ, ಅವರನ್ನು ಪುನಃ ಜೈಲಿಗೆ ಕಳುಹಿಸಿತ್ತು.
ಪ್ರದೋಶ್ ಈ ಪ್ರಕರಣದ 14ನೇ ಆರೋಪಿ ಆಗಿದ್ದು, ಘಟನೆಯ ಸಮಯದಲ್ಲಿ ದರ್ಶನ್ ಜೊತೆಗೆ ಇದ್ದ ಎಂದು ತನಿಖಾ ವರದಿಗಳು ಹೇಳುತ್ತವೆ. ದರ್ಶನ್ ಅವರಿಂದ ₹30 ಲಕ್ಷ ಹಣ ಪಡೆದುಕೊಂಡು ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪವೂ ಅವರ ಮೇಲೆ ಇದೆ.
ಘಟನೆ ನಡೆದ ದಿನದಂದು ದರ್ಶನ್ ಮತ್ತು ಪ್ರದೋಶ್ ಇಬ್ಬರೂ ಸ್ಟೋನಿ ಬ್ರೂಕ್ ಹೋಟೆಲ್ನಲ್ಲಿ ಇದ್ದರೆಂದು ಹೇಳಲಾಗಿದ್ದು, ಅಲ್ಲಿಯೇ ರೇಣುಕಾ ಸ್ವಾಮಿ ಅಪಹರಣದ ಸಂಚು ರೂಪಿತವಾಯಿತು ಎಂಬ ಆರೋಪ ತನಿಖಾ ಅಧಿಕಾರಿಗಳ ವರದಿಯಲ್ಲಿ ಉಲ್ಲೇಖವಾಗಿದೆ.
ಪ್ರಸ್ತುತ ಪ್ರದೋಶ್ ಅವರಿಗೆ ನೀಡಲಾದ ಈ ಮಧ್ಯಂತರ ಜಾಮೀನು ಕೇವಲ 20 ದಿನಗಳವರೆಗೆ ಮಾತ್ರ ಮಾನ್ಯವಾಗಿದ್ದು, ನಂತರ ಅವರು ಮತ್ತೆ ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?