Renukaswamy Case: ನಟ ದರ್ಶನ್ ಜಾಮೀನು ಅರ್ಜಿ ಆದೇಶ ಯಾವಾಗ..? ಸುಪ್ರೀಂ ಕೋರ್ಟ್ ಹೇಳಿದ್ದೇನು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಮತ್ತು ಇನ್ನಿತರ 16 ಆರೋಪಿಗಳಿಗೆ ಜಾಮೀನು ದೊರೆತಿದ್ದು, ಈ ಪೈಕಿ ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳ ಜಾಮೀನು ರದ್ದುಪಡಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಕೋರ್ಟ್ ಈಗ ತೀರ್ಪು ಕಾಯ್ದಿರಿಸಿದ್ದು, ಮುಂದಿನ 10 ದಿನಗಳಲ್ಲಿ ತೀರ್ಪು ನೀಡಲಿದೆ.
ಈ ಕುರಿತು ನವದೆಹಲಿಯ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಸಿದ್ದಾರ್ಥ್ ಲೂಥ್ರಾ ವಾದ ಮಂಡಿಸಿ, “ಇದು ಭೀಕರ ಕೊಲೆ ಪ್ರಕರಣ. ಅಪಾರ್ಟ್‌ಮೆಂಟ್ ಬಳಿ ಮೃತದೇಹ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಸಾಕಷ್ಟು ಗಂಭೀರ ಸಾಕ್ಷ್ಯಗಳಿವೆ. ಎಂಟು ಮಂದಿಗೆ ಈಗಾಗಲೇ ಜಾಮೀನು ದೊರೆತಿದ್ದು, ಆವರಲ್ಲಿ ಏಳು ಮಂದಿ ಆರೋಪಿಗಳ ಜಾಮೀನು ತಕ್ಷಣ ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
ಈ ಹಿಂದೆ, ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರೆಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿನಲ್ಲೂ ಬೆನ್ನು ನೋವಿನ ಕಾರಣ ನೀಡಿ ಅವರು ಮಧ್ಯಂತರ ಜಾಮೀನು ಪಡೆದುಕೊಂಡರು. ನಂತರ, ಕರ್ನಾಟಕ ಹೈಕೋರ್ಟ್ ದರ್ಶನ್ ಅವರಿಗೆ ಸಂಪೂರ್ಣ ಜಾಮೀನು ನೀಡಿತು.
ಆದರೆ, ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ದೂರು ನೀಡಿತ್ತು. ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ಆದೇಶದ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದರ್ಶನ್ ಮತ್ತು ಪವಿತ್ರಾ ನಡುವಿನ ಸಂಬಂಧ, ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದ ಬಗ್ಗೆ ಸಾಕ್ಷ್ಯಗಳೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕೋರಿರುವ ಸುಪ್ರೀಂ ಕೋರ್ಟ್, ತೀರ್ಪು ನೀಡುವ ತನಕ ಜಾಮೀನು ಪ್ರಶ್ನಿಸುವ ಅರ್ಜಿಯನ್ನು ಕಾಯ್ದಿರಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






