ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಕೇಸ್‌ಗೆ ಎಸ್‌ಐಟಿ; ಓರ್ವ ಅಧಿಕಾರಿ ಹೊರಕ್ಕೆ - ಗೃಹ ಸಚಿವ ಹೇಳಿದ್ದೇನು?

ಬೆಂಗಳೂರು:- ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡದಿಂದ ಐಪಿಎಸ್ ಅಧಿಕಾರಿ ಸೌಮ್ಯಲತಾ ಹೊರಗುಳಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಅಧಿಕೃತವಾಗಿ ನನಗೆ ಅವರು ಮಾಹಿತಿ ತಿಳಿಸಿಲ್ಲ. ಆದರೆ ಅನ್‌ಅಫಿಷಿಯಲ್ ಆಗಿ ಅವರು ತಂಡದಿಂದ ಹೊರಗುಳಿಯುವ ವಿಚಾರಕ್ಕೆ ಪತ್ರ ಬರೆದಿರುವುದು ಗೊತ್ತಾಗಿದೆ. ವೈಯಕ್ತಿಕ ಕಾರಣ ಇದೆ. ಹಾಗಾಗಿ ತಂಡದಿಂದ ಹೊರಗುಳಿಯುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಅವರನ್ನು ತಂಡದಿಂದ ಬದಲಾಯಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೂ ಜಾತಿ ಜನಗಣತಿ ಸಮೀಕ್ಷೆಗೆ ಕಡಿಮೆ ದಿನಗಳ ಅವಕಾಶದ ವಿಚಾರವಾಗಿ ಮಾತನಾಡಿದ ಅವರು, ತಾಂತ್ರಿಕವಾಗಿ 16 ದಿನಗಳಲ್ಲಿ ಸಮೀಕ್ಷೆ ಮಾಡಬಹುದು. ಈಗೆಲ್ಲ ತಂತ್ರಜ್ಞಾನ ಇದೆ. ಸಮೀಕ್ಷೆ ಮಾಡಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ವಿಚಾರದಲ್ಲಿ ಏನೂ ಸಂಘರ್ಷ ಇಲ್ಲ. ನಮ್ಮ ರಾಜ್ಯದ ಮಟ್ಟಿಗೆ ನಾವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯಲು ಸಮೀಕ್ಷೆ ಮಾಡ್ತಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ಈಗ ಬೇಗನೇ ಸಮೀಕ್ಷೆ ಮಾಡಬಹುದು ಎಂದು ಹೇಳಿದ್ದಾರೆ.
ಆಂಧ್ರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ಆಂಧ್ರ ಪ್ರದೇಶದ ಪೊಲೀಸರು ಈ ಬಗ್ಗೆ ತನಿಖೆ ಮಾಡ್ತಾರೆ. ಹತ್ಯೆಯಾದವರು ನಮ್ಮ ರಾಜ್ಯದವರಾಗಿರೋದ್ರಿಂದ ಆಂಧ್ರ ಪೊಲೀಸರು ಇಲ್ಲಿಗೂ ಬಂದು ತನಿಖೆ ಮಾಡ್ತಾರೆ. ನಮ್ಮ ಪೊಲೀಸರು ತನಿಖೆಯ ಫಾಲೋಅಪ್ ಮಾಡ್ತಾರೆ. ಆಂಧ್ರದಲ್ಲಿ ಹತ್ಯೆ ಆಗಿರುವ ಹಿನ್ನೆಲೆ ಆ ರಾಜ್ಯದವರೇ ತನಿಖೆ ಮಾಡ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






