World Cup 2025: ಆಸ್ಟ್ರೇಲಿಯಾಗೆ ಮುಖಭಂಗ; ವಿಶ್ವಕಪ್ ಫೈನಲ್​'ಗೇರಿದ ಟೀಂ ಇಂಡಿಯಾ

ಅಕ್ಟೋಬರ್ 30, 2025 - 23:31
 0  18
World Cup 2025: ಆಸ್ಟ್ರೇಲಿಯಾಗೆ ಮುಖಭಂಗ; ವಿಶ್ವಕಪ್ ಫೈನಲ್​'ಗೇರಿದ ಟೀಂ ಇಂಡಿಯಾ

ಜೆಮಿಮಾ ರೋಡ್ರಿಗಸ್ ಅವರ ಅಜೇಯ ಶತಕ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ತಂಡವು 2025ರ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ರೋಮಾಂಚಕ ಪಂದ್ಯದಲ್ಲಿ ಭಾರತ 48.3 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 341 ರನ್ ಗಳಿಸಿ ಗೆಲುವು ಸಾಧಿಸಿತು.

ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 49.5 ಓವರ್‌ಗಳಲ್ಲಿ 338 ರನ್ ಗಳಿಸಿತು. ಆರಂಭಿಕ ಲಿಚ್‌ಫೀಲ್ಡ್ ಶತಕ (119) ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಅವರೊಂದಿಗೆ ಎಲಿಸ್ ಪೆರ್ರಿ (77) 155 ರನ್‌ಗಳ ಎರಡನೇ ವಿಕೆಟ್‌ ಪಾಲುದಾರಿಕೆಯನ್ನು ಹಂಚಿಕೊಂಡರು. ಆಶ್ಲೇ ಗಾರ್ಡ್ನರ್ (63) ಉತ್ತಮ ಪ್ರದರ್ಶನ ನೀಡಿದರೂ, ಉಳಿದ ಬ್ಯಾಟರ್‌ಗಳು ವಿಫಲರಾದರು. ದೀಪ್ತಿ ಶರ್ಮಾ ಮತ್ತು ಶ್ರೀ ಚರಣ್ ತಲಾ ಎರಡು ವಿಕೆಟ್ ಪಡೆದರು.

ಭಾರತದ ಇನ್ನಿಂಗ್ಸ್ ಆರಂಭದಲ್ಲಿ ಆರಂಭಿಕರು ಬೇಗನೇ ಔಟಾದರೂ, ಜೆಮಿಮಾ ಮತ್ತು ಹರ್ಮನ್‌ಪ್ರೀತ್ ಜೋಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇವರಿಬ್ಬರು ಮೂರನೇ ವಿಕೆಟ್‌ಗೆ 167 ರನ್‌ಗಳ ಪಾಲುದಾರಿಕೆಯನ್ನು ದಾಖಲಿಸಿದರು. ಜೆಮಿಮಾ 134 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ 127 ರನ್‌ಗಳ ಅಜೇಯ ಶತಕ ಬಾರಿಸಿದರೆ, ಹರ್ಮನ್‌ಪ್ರೀತ್ 88 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 89 ರನ್‌ಗಳಿಸಿದರು.

ಆಸ್ಟ್ರೇಲಿಯಾ ಪರ ಕಿಮ್ ಗಾರ್ತ್ ಮತ್ತು ಅನ್ನಾಬೆಲ್ ಸದರ್ಲ್ಯಾಂಡ್ ತಲಾ ಎರಡು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಗುಂಪು ಹಂತದಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡ ಭಾರತ, ಇತಿಹಾಸ ಸೃಷ್ಟಿಸಿ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲು ಸಜ್ಜಾಗಿದೆ. ಭಾರತ ತಂಡವು ಇದಕ್ಕೂ ಮೊದಲು 2005 ಮತ್ತು 2017ರಲ್ಲಿ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಈ ಬಾರಿ ಚಾಂಪಿಯನ್ ಪಟ್ಟಕ ಗೆಲ್ಲುವ ಅಪಾರ ಅವಕಾಶವನ್ನು ಹರ್ಮನ್ ಪಡೆ ಹೊಂದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow