ಬೆಂಗಳೂರು ಅಭಿವೃದ್ಧಿಗೆ ಸಹಕಾರವಿಲ್ಲ, ಬಿಜೆಪಿಯವರಿಗೆ ರಾಜಕೀಯವೇ ಹೆಚ್ಚು: ಡಿ.ಕೆ. ಶಿವಕುಮಾರ್ ಕಿಡಿ
ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ. ಪ್ರತಿ ವಿಚಾರದಲ್ಲೂ ತಡೆಯಾಜ್ಞೆ, ಆಕ್ಷೇಪಣೆ ತರುತ್ತಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವುದಕ್ಕೇ ಒಂದು ತಂಡವಿದೆ. ಬಿಜೆಪಿಯವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.
ಯಶವಂತಪುರ ವಿಧಾನಸಭೆ ಕ್ಷೇತ್ರದ ಹೇರೋಹಳ್ಳಿಯ ಭರತ್ ನಗರ ಗಾಂಧಿ ಉದ್ಯಾನವನದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ನಾಗರಿಕರ ಜತೆ ಸಂವಾದ ಸಂದರ್ಭದಲ್ಲಿ ಮಾತನಾಡಿದರು.
“ನೀವು ಕಸದ ವಿಚಾರ ಪ್ರಸ್ತಾಪಿಸಿದ್ದೀರಿ. ಇದು ಮೂಲಭೂತ ಸಮಸ್ಯೆಯಾಗಿದ್ದು, ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೂ ನಾನು ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ಮನವಿ ಮಾಡುತ್ತಿದ್ದೇವೆ. ನನ್ನ ಕೈಲಾದಷ್ಟು ನಿಮಗೆ ಸಹಾಯ ಮಾಡುತ್ತೇನೆ. ಇಡೀ ವಿಶ್ವ ಈ ಬೆಂಗಳೂರನ್ನು ನೋಡುತ್ತಿದೆ. ಕೆಂಪೇಗೌಡರು ಕಟ್ಟಿರುವ ಬೆಂಗಳೂರಿಗೆ ಹೊಸ ರೂಪ ನೀಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.
“ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ, ರಸ್ತೆ ಗಾತ್ರ ಮಾತ್ರ ಅಷ್ಟೇ ಇದೆ. ಹೀಗಾಗಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಇದನ್ನು ಬಗೆಹರಿಸಲು 117 ಕಿ.ಮೀ ಉದ್ಧದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ. ಈಗಾಗಲೇ ಅಧಿಸೂಚನೆ ಹೊರಡಿಸಿರುವ ಜಮೀನುಗಳನ್ನು ನಾನು ಯಾವುದೇ ಕಾರಣಕ್ಕೂ ಡಿನೋಟಿಫಿಕೇಷನ್ ಮಾಡುವುದಿಲ್ಲ. ಭೂಸಂತ್ರಸ್ತರಿಗೆ ಅಗತ್ಯ ಪರಿಹಾರ ನೀಡುತ್ತೇವೆ. ಇದರ ಜೊತೆಗೆ ಟನಲ್ ರಸ್ತೆಗೆ ಮುಂದಾಗಿದ್ದು, ಅದಕ್ಕೂ ಸಾಕಷ್ಟು ಅಡಚಣೆ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ, ನಾನು ನನ್ನ ಕರ್ತವ್ಯ ಮಾಡುತ್ತೇನೆ” ಎಂದು ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?