IND vs AUS: ಟೀಂ ಇಂಡಿಯಾಕ್ಕೆ ಬಿಗ್ ಶಾಕ್: ಮೊದಲ 3 ಟಿ20 ಪಂದ್ಯಗಳಿಂದ ಹೊರಬಿದ್ದ ಸ್ಟಾರ್ ಆಲ್ ರೌಂಡರ್!
ಕ್ಯಾನ್‌ಬೆರಾ: ಐದು ಪಂದ್ಯಗಳ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ. ಸ್ಟಾರ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದ ಸಮಸ್ಯೆಯಿಂದ ಸರಣಿಯ ಮೊದಲ ಮೂರು ಪಂದ್ಯಗಳಿಂದ ಹೊರಗಿಡಲ್ಪಟ್ಟಿದ್ದಾರೆ.
ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಬಿಸಿಸಿಐ ಪ್ರಕಟಣೆಯ ಪ್ರಕಾರ, ನಿತೀಶ್ ಕುಮಾರ್ ರೆಡ್ಡಿ ಅವರು ಎಡ ಮೊಣಕೈ ಗಾಯ ಮತ್ತು ಕುತ್ತಿಗೆ ಸೆಳೆತ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ತಂಡ ಅವರ ಚೇತರಿಕೆಯನ್ನು ನಿಗಾದಿಂದ ವೀಕ್ಷಿಸುತ್ತಿದೆ.
ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ನಿತೀಶ್ ಎಡ ಮೊಣಕೈ ಗಾಯಕ್ಕೆ ತುತ್ತಾಗಿದ್ದರು. ಜೊತೆಗೆ ಕುತ್ತಿಗೆ ಸೆಳೆತವೂ ಉಂಟಾಗಿದೆ. ಆದ್ದರಿಂದ ಅವರನ್ನು ಮೊದಲ ಮೂರು ಟಿ20 ಪಂದ್ಯಗಳಿಂದ ಹೊರಗಿಡಲಾಗಿದೆ. ಅವರ ಬದಲಿಗೆ ಯಾವುದೇ ಆಟಗಾರನನ್ನು ತಂಡಕ್ಕೆ ಸೇರಿಸಿಲ್ಲ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕ್ಯಾನ್‌ಬೆರಾದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯಕ್ಕೂ ಮುನ್ನ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಸಂದರ್ಭದಲ್ಲಿ ತಂಡದ ಆಡುವ ಹನ್ನೊಂದರ ಬಗ್ಗೆ ಮಾಹಿತಿ ನೀಡಿದರು.
ಅವರ ಪ್ರಕಾರ, ರಿಂಕು ಸಿಂಗ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ. ಆದರೆ ನಿತೀಶ್ ಅವರ ಗಾಯದ ಕುರಿತು ಅಂದು ಯಾವುದೇ ವಿವರ ನೀಡಲಾಗಿರಲಿಲ್ಲ.
ಭಾರತದ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ಜಸ್ಪ್ರಿತ್ ಬುಮ್ರಾ.
ನಿಮ್ಮ ಪ್ರತಿಕ್ರಿಯೆ ಏನು?