ವಿಜಯಪುರ: ತಮಿಳುನಾಡು ಮೂಲದ ಉಗ್ರ ಟೈಲರ್ ರಾಜಾ ಅಲಿಯಾಸ್ ರಾಜಾ ಸಿದ್ಧಿಕಿಯ ವಿಜಯಪುರ ಮನೆಯಲ್ಲಿ ನಡೆದ ಶೋಧದ ವೇಳೆ ಮಹತ್ವದ ನಕಲಿ ದಾಖಲೆಗಳು ಪತ್ತೆಯಾದ ಹಿನ್ನೆಲೆ, ಭಯೋತ್ಪಾದನಾ ನಿಗ್ರಹ ದಳ ತನಿಖೆ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದೆ.
27 ವರ್ಷಗಳ ಹಿಂದೆ, ಅಂದರೆ 1998ರಲ್ಲಿ ಕೊಯಮತ್ತೂರಿನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಆಗಿದ್ದ ರಾಜಾ ಸಿದ್ಧಿಕಿಯನ್ನು 2025ರ ಜುಲೈ 9ರಂದು ವಿಜಯಪುರದಲ್ಲಿ ಬಂಧಿಸಲಾಗಿತ್ತು. ಈ ಸ್ಫೋಟದಲ್ಲಿ 58 ಜನರು ಸಾವನ್ನಪ್ಪಿ, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಬಂಧನದ ಬಳಿಕ ತಮಿಳುನಾಡು ಭಯೋತ್ಪಾದನಾ ನಿಗ್ರಹ ದಳವು ವಿಜಯಪುರದ ಇಬ್ರಾಹಿಂ ರೋಜಾ ಪ್ರದೇಶದಲ್ಲಿರುವ ಉಗ್ರನ ವಾಸಸ್ಥಳದಲ್ಲಿ ಶೋಧ ನಡೆಸಿದಾಗ, ನಕಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಗ್ಯಾಸ್ ಬುಕ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಹಲವು ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.
ತಲೆಮರೆಸಿಕೊಂಡು ವರ್ಷಗಳ ಕಾಲ ಹಲವು ರಾಜ್ಯಗಳಲ್ಲಿ ತಿರುಗಾಡುತ್ತಿದ್ದ ರಾಜಾ ಸಿದ್ಧಿಕಿ, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಟೈಲರಿಂಗ್ ಕಲಿತು "ಟೈಲರ್ ರಾಜಾ" ಎಂಬ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದ. ನಂತರ 2014ರಲ್ಲಿ ವಿಜಯಪುರಕ್ಕೆ ಬಂದು “ಶಹಜಾನ್ ಶೇಖ್” ಎಂಬ ಹೆಸರಿನಲ್ಲಿ ಹೊಸ ಜೀವನ ಆರಂಭಿಸಿದ್ದ. ವಿಜಯಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಹೋಲ್‌ಸೇಲ್ ವ್ಯಾಪಾರ ನಡೆಸುತ್ತಿದ್ದ ಎನ್ನಲಾಗಿದೆ.
ಸದ್ಯ ಪತ್ತೆಯಾದ ದಾಖಲೆಗಳು ನಕಲಿ ಆಧಾರ್ ಕಾರ್ಡ್ ಮಾಫಿಯಾ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರಾ? ಎಂಬ ಗಂಭೀರ ಪ್ರಶ್ನೆ ಹುಟ್ಟುಹಾಕಿವೆ. ಉಗ್ರನ ಮನೆಯಿಂದ ವಶಪಡಿಸಿಕೊಂಡ ದಾಖಲೆಗಳನ್ನು ತಮಿಳುನಾಡು ನಿಗ್ರಹ ದಳ ತಾಂತ್ರಿಕ ವಿಶ್ಲೇಷಣೆಗೆ ಕಳುಹಿಸಿದ್ದು, ಇದರ ಹಿಂದೆ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.