Mysuru Dasara: ಜಂಬೂ ಸವಾರಿಗೆ ಕ್ಷಣಗಣನೆ: ಇಂದಿನ ಕಾರ್ಯಕ್ರಮದ ಪೂರ್ತಿ ವಿವರ ಇಲ್ಲಿದೆ ನೋಡಿ!
ಮೈಸೂರು: ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಅಕ್ಟೋಬರ್ 2) ಕೋಟ್ಯಂತರ ಜನರು ಕಣ್ತುಂಬಿಕೊಳ್ಳಲಿರುವ ಈ ಐತಿಹಾಸಿಕ ಮೆರವಣಿಗೆಯಲ್ಲಿ ದಸರಾ ಗಜಪಡೆಯ ನಾಯಕ ಅಭಿಮನ್ಯು ಆನೆ, 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗಲಿದೆ. ಜಂಬೂ ಸವಾರಿಯ ಶುಭ ಮುಹೂರ್ತ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
11 ದಿನಗಳ ನಾಡಹಬ್ಬದ ಅಂತಿಮ ದಿನವಾದ ಇಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಅಭಿಮನ್ಯು ಆನೆ ಅರಮನೆ ಬಳಿಯಿಂದ ಚಿನ್ನದ ಅಂಬಾರಿಯನ್ನು ಹೊತ್ತು ಕೆ.ಆರ್.ವೃತ್ತ – ಸಯ್ಯಾಜಿರಾವ್ ರಸ್ತೆ – ಆಯುರ್ವೇದಿಕ್ ವೃತ್ತ – ಬಂಬೂ ಬಜಾರ್ ಮಾರ್ಗವಾಗಿ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ ದೂರ ಸಾಗಲಿದೆ. ಜಂಬೂ ಸವಾರಿಗೆ ಆಕರ್ಷಕ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳು ಸಾಥ್ ನೀಡುವ ಮೂಲಕ ಮೆರವಣಿಗೆಯನ್ನು ಮತ್ತಷ್ಟು ಮೆರುಗುಗೊಳಿಸಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 1ರಿಂದ 1.18ರ ಶುಭ ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಬಳಿಕ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಈ ಮೆರವಣಿಗೆಯಲ್ಲಿ ನಿಶಾನೆ ಆನೆಗಳು, ನೌಪತ್ ಹಾಗೂ ಸಾಲಾನೆಗಳ ಜೊತೆಗೆ 100ಕ್ಕೂ ಹೆಚ್ಚು ಕಲಾ ತಂಡಗಳು, 60ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು, ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ ಹಾಗೂ ಪೊಲೀಸ್ ತುಕಡಿಗಳು ಸಾಗಲಿವೆ.
ತದನಂತರ, ಕುಂಭ ಲಗ್ನದಲ್ಲಿ ಸಂಜೆ 4.42ರಿಂದ 5.06 ವರೆಗಿನ ಶುಭ ಮುಹೂರ್ತದಲ್ಲಿ ಚಿನ್ನದ ಅಂಬಾರಿಯಲ್ಲಿ ಆಸೀನಳಾಗಿರುವ ಚಾಮುಂಡೇಶ್ವರಿ ತಾಯಿಗೆ ಸಿಎಂ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಆರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಿದ್ದು, ಪಿರಂಗಿ ದಳವು 21 ಸುತ್ತು ಕುಶಾಲತೋಪುಗಳನ್ನು ಸಿಡಿಸಲಿದೆ. 6ನೇ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊರಲಿದೆ. ಅಭಿಮನ್ಯುಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಸಾಥ್ ನೀಡಲಿವೆ.
ಜಂಬೂ ಸವಾರಿ ವೀಕ್ಷಣೆಗಾಗಿ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಸುಮಾರು 45 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಅಂಬಾರಿ ಸಾಗುವ ಮಾರ್ಗದ ಉದ್ದಕ್ಕೂ ರಸ್ತೆಯ ಎರಡು ಬದಿಗಳಲ್ಲಿ ಜನರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಆನಂತರ ರಾತ್ರಿ 7 ಗಂಟೆಗೆ ಬನ್ನಿಮಂಪಟದಲ್ಲಿ ಪಂಜಿನ ಕವಾಯತು ಇರಲಿದೆ. ಇದರೊಂದಿಗೆ ದಸರಾ ಆಚರಣೆಯು ಅಂತ್ಯವಾಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?