ಅಮಾನವೀಯವಾಗಿ ನಡೆಸಿಕೊಳ್ತಿರೋ ಆರೋಪ: ಮಾನವ ಹಕ್ಕು ಆಯೋಗದ ಮೊರೆ ಹೋಗಲಿರುವ ದರ್ಶನ್
ಪರಪ್ಪನ ಅಗ್ರಹಾರದ ಕ್ವಾರಂಟೈನ್ ಬ್ಯಾರಕ್‌ನಲ್ಲಿ ದರ್ಶನ್‌ಗೆ ನರಕಯಾತನೆಯಾಗಿದ್ದು, 'ಹಾಸಿಗೆ-ದಿಂಬು ಬೇಡ, ನೆಲದ ಮೇಲಾದರೂ ಮಲಗುತ್ತೇನೆ, ಬೇರೆ ಸೆಲ್‌ಗೆ ಶಿಫ್ಟ್ ಮಾಡಿ' ಎಂದು ಮನವಿ ಮಾಡಿದ್ದಾರೆ. ಜೈಲಿನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಮಾನವ ಹಕ್ಕು ಆಯೋಗ ಹಾಗೂ ಹೈಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿದ್ದಾರೆ.
ಹೌದು ದರ್ಶನ್, ತಮಗೆ ಜೈಲಿನಲ್ಲಿ ಕೆಲ ಸಾಮಾನ್ಯ ಸೌಕರ್ಯಗಳು ಸಿಗುತ್ತಿಲ್ಲವೆಂದು ದೂರಿದ್ದು, ಜೈಲಧಿಕಾರಿಗಳ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ದೂರಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇರುವಾಗಲೇ ನಟ ದರ್ಶನ್, ತಮ್ಮ ‘ಹಕ್ಕು’ಗಳಿಗಾಗಿ ಇದೀಗ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ತಮ್ಮನ್ನು ಬಿಸಿಲು ಚೆನ್ನಾಗಿ ಬರುವ ಬ್ಯಾರಕ್ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಮಾತ್ರವಲ್ಲದೆ ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್ಶೀಟ್ಗಳು ಬೇಕೆಂದು ಮನವಿ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಜೈಲು ಅಧೀಕ್ಷಕರು ಅನುಮತಿ ನೀಡಿಲ್ಲ. ಹೀಗಾಗಿ ದರ್ಶನ್ ಪರ ವಕೀಲು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇತ್ತೀಚೆಗಷ್ಟೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಏರಿದ ಧ್ವನಿಯಲ್ಲಿ ವಾದ-ಪ್ರತಿವಾದಗಳು ನಡೆದಿವೆ. ನ್ಯಾಯಾಲಯವು ಅಕ್ಟೋಬರ್ 09ಕ್ಕೆ ಆದೇಶವನ್ನು ಕಾಯ್ದಿರಿಸಿದೆ.
ಆದರೆ ನಟ ದರ್ಶನ್, ಇದೀಗ ಮಾನವ ಹಕ್ಕು ಆಯೋಗದ ಮೊರೆ ಹೋಗಲು ನಿರ್ಧಾರ ಮಾಡಿದ್ದಾರೆ. ಮಾನವ ಆಯೋಗಕ್ಕೆ ಪತ್ರ ಬರೆದು ತಮಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಲಿದ್ದಾರೆ. ನ್ಯಾಯಾಲಯದಲ್ಲಿ ವಾದ-ಪ್ರತಿವಾದದ ವೇಳೆಯೂ ಸಹ ದರ್ಶನ್ ಪರ ವಕೀಲರು, ಜೈಲಧಿಕಾರಿಗಳು ಅಮಾನವೀಯವಾಗಿ ದರ್ಶನ್ ಜೊತೆಗೆ ನಡೆದುಕೊಳ್ಳುತ್ತಿದ್ದಾರೆ ಎಂದು ವಾದಿಸಿದ್ದರು. ಇದೇ ಕಾರಣಕ್ಕೆ ಈಗ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಲು ದರ್ಶನ್ ಮುಂದಾಗಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?