ಸಿರಾಜ್ ಬಗ್ಗೆ ವಾದ–ವಿವಾದ: ಪಾಕಿಸ್ತಾನ ಲೈವ್ ಶೋನಲ್ಲಿ ಕ್ರಿಕೆಟಿಗರ ನಡುವೇ ಭಾರಿ ಜಟಾಪಟಿ!

ಇಂಗ್ಲೆಂಡ್ ವಿರುದ್ಧ ನಡೆದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 23 ವಿಕೆಟ್ಗಳನ್ನು ಕಲೆಹಾಕಿ ಅತ್ಯುತ್ತಮ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಕುರಿತಂತೆ ಪಾಕಿಸ್ತಾನದಲ್ಲಿ ಪ್ರಸಾರವಾಗಿದ್ದ ಲೈವ್ ಕಾರ್ಯಕ್ರಮವೊಂದರಲ್ಲಿ ಮಾಜಿ ಕ್ರಿಕೆಟಿಗರ ನಡುವೆ ಜಟಾಪಟಿ ನಡೆದಿದೆ. ಈ ವಿವಾದದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನದ ಪಿಟಿವಿ ಸ್ಪೋರ್ಟ್ಸ್ ವಾಹಿನಿಯಲ್ಲಿ ನಡೆದ ಲೈವ್ ಶೋನಲ್ಲಿ, ಮಾಜಿ ವೇಗಿ ತನ್ವೀರ್ ಅಹ್ಮದ್ ಹಾಗೂ ಪತ್ರಕರ್ತ ಹಾಗೂ ದೇಶೀಯ ಕ್ರಿಕೆಟಿಗ ಆಸಿಫ್ ಖಾನ್ ನಡುವಿನಲ್ಲಿ ವಾಗ್ವಾದ ಉಂಟಾಯಿತು. ಸಿರಾಜ್ ಅವರನ್ನು ಟೆಸ್ಟ್ ಬೌಲರ್ ಎಂದು ಪರಿಗಣಿಸುವುದಿಲ್ಲ ಎಂದು ತನ್ವೀರ್ ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಸ್ಪಂದಿಸಿದ ಆಸಿಫ್ ಖಾನ್, "ಅವರು ಇಂಗ್ಲೆಂಡ್ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದಾರೆ, ಹೇಗೆ ನೀವು ಟೆಸ್ಟ್ ಬೌಲರ್ ಅಲ್ಲ ಎಂದು ಹೇಳಬಹುದು?" ಎಂದು ಪ್ರಶ್ನಿಸಿದರು.
ಇದಕ್ಕೆ ಕೋಪಗೊಂಡ ತನ್ವೀರ್, "ನಾನು ಪಾಕಿಸ್ತಾನ ತಂಡದ ಪರ ಆಡಿದ್ದೇನೆ, ನನ್ನನ್ನು ಪ್ರಶ್ನಿಸುವ ಹಕ್ಕು ನಿಮಗಿಲ್ಲ" ಎಂದು ಪ್ರತಿಕ್ರಿಯಿಸಿದರು. ತಕ್ಷಣವೇ ಆಸಿಫ್ ಖಾನ್ ಕೂಡ ತೀವ್ರವಾಗಿ ಪ್ರತಿಸ್ಪಂದಿಸಿ, "ನಾನು 20-22 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದೇನೆ" ಎಂದು ಹೇಳಿದರು.
ಈ ವಾಗ್ವಾದದ ಬಳಿಕ ಶೋ ಒಂದು ವೇಳೆ ತೀವ್ರ ವಿವಾದಕ್ಕೆ ತಿರುಗಿದ್ದು, ಕಾರ್ಯಕ್ರಮದ ನಿರೂಪಕರಿಗೆ ಮಧ್ಯ ಪ್ರವೇಶಿಸಬೇಕಾಯಿತು. ಈ ಸಂದರ್ಭದಲ್ಲಿ ಇಬ್ಬರು ಪರಸ್ಪರ ಆಕ್ರೋಶ ವ್ಯಕ್ತಪಡಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?






