ಮರ್ಯಾದಾ ಹತ್ಯೆ; ಬೇರೆ ಜಾತಿಯವನೆಂದು ಅಳಿಯನನ್ನೇ ಕೊಚ್ಚಿ ಕೊಂದ ಮಾವ!

ಅಕ್ಟೋಬರ್ 15, 2025 - 22:20
 0  13
 ಮರ್ಯಾದಾ ಹತ್ಯೆ; ಬೇರೆ ಜಾತಿಯವನೆಂದು ಅಳಿಯನನ್ನೇ ಕೊಚ್ಚಿ ಕೊಂದ ಮಾವ!

ತಮಿಳುನಾಡು: ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ವಟ್ಟಲಕುಂಡು ಸಮೀಪದ ರಾಮನಾಯಕನ್ ಪಟ್ಟಿ ಗ್ರಾಮದಲ್ಲಿ ನಡೆದ ಆಘಾತಕಾರಿ ಮರ್ಯಾದಾ ಹತ್ಯೆ ಘಟನೆಯೊಂದು ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಬೇರೆ ಜಾತಿಯವನಾಗಿದ್ದ ಕಾರಣಕ್ಕೆ ತಂದೆಯೇ ತನ್ನ ಮಗಳ ಗಂಡನನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿ 24 ವರ್ಷದ ರಾಮಚಂದ್ರನ್, ಅವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಡೈರಿ ಫಾರ್ಮ್‌ನಲ್ಲಿ ಕೆಲಸ ಮಾಡುವ ವೇಳೆ ಚಂದ್ರನ್ ಅವರ ಮಗಳು ಆರತಿ (21) ಅವರ ಪರಿಚಯವಾಯಿತು. ಕಾಲೇಜಿನಲ್ಲಿ 2ನೇ ವರ್ಷದ ಪದವಿ ಓದುತ್ತಿದ್ದ ಆರತಿ ಹಾಗೂ ರಾಮಚಂದ್ರನ್ ನಡುವೆ ಪ್ರೇಮ ಬೆಳೆದಿತ್ತು. ಇಬ್ಬರೂ ಇನ್‌ಸ್ಟಾಗ್ರಾಮ್ ಮೂಲಕ ತಮ್ಮ ಪ್ರೀತಿಯನ್ನು ಮುಂದುವರಿಸಿಕೊಂಡು ಕೊನೆಗೆ ರಿಜಿಸ್ಟರ್ ಮದುವೆಯಾದರು.

ರಾಮಚಂದ್ರನ್ ಕುಟುಂಬವು ಅವರ ಮದುವೆಯನ್ನು ಒಪ್ಪಿಕೊಂಡಿದ್ದರೆ, ಆರತಿಯ ಕುಟುಂಬವು ಕೋಪಗೊಂಡಿತ್ತು. ಮದುವೆಯಾದ ಬಳಿಕ ಆರತಿಯ ತಂದೆ ಚಂದ್ರನ್ ಹಲವು ಬಾರಿ ದಂಪತಿಗೆ ಬೆದರಿಕೆ ಹಾಕಿದ್ದಾಗಿ ತಿಳಿದುಬಂದಿದೆ.

ಬೆಳಿಗ್ಗೆ ಹಾಲು ಮಾರಲು ಹೊರಟಿದ್ದ ರಾಮಚಂದ್ರನ್ ಅವರ ದಾರಿಗೆ ಅಡ್ಡ ಬಂದ ಚಂದ್ರನ್, ವಾಗ್ವಾದದ ವೇಳೆ ಕತ್ತಿಯಿಂದ ಅವರ ಮೇಲೆ ದಾಳಿ ನಡೆಸಿ ಕೊಲೆ ಮಾಡಿದರು. ರಾಮಚಂದ್ರನ್ ಸ್ಥಳದಲ್ಲೇ ಮೃತಪಟ್ಟರು.

ಘಟನೆಗೆ ಸಂಬಂಧಿಸಿದಂತೆ ನೀಲಕೊಟ್ಟೈ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗಾಗಿ ದಿಂಡಿಗಲ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಜಾತಿ ಆಧಾರಿತ ಹತ್ಯೆಯಾದ್ದರಿಂದ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ಇದೇ ವೇಳೆ, ಆರತಿಯ ತಂದೆ ಚಂದ್ರನ್ ತಾನೇ ಕೊಲೆ ಮಾಡಿದ ವಿಚಾರವನ್ನು ಒಪ್ಪಿಕೊಂಡು ದಿಂಡಿಗಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶರಣಾಗಿದ್ದಾರೆ. ಘಟನೆ ದಿಂಡಿಗಲ್ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ಉಂಟುಮಾಡಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow