ಯುದ್ಧದಿಂದ ಎರಡೂ ದೇಶಗಳಲ್ಲಿ ಹಾನಿ ಮತ್ತು ನೋವು ಆಗುತ್ತದೆ ಅಷ್ಟೇ: ನಟಿ ಐಶ್ವರ್ಯಾ

ಭಾರತ ಹಾಗೂ ಪಾಕಿಸ್ತಾ ದ ನಡುವೆ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ. ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿದೆ. ಪಾಕಿಸ್ತಾನವೂ ಕೂಡ ಪ್ರತಿ ದಾಳಿ ನಡೆಸಿದ್ದರೂ ಎಲ್ಲವೂ ವಿಫಲಗೊಂಡಿದೆ. ಸಧ್ಯಕ್ಕೆ ಪಾಕಿಸ್ತಾನ ಹಾಗೂ ಭಾರತದ ನಡುವೆ ಯುದ್ಧ ಸ್ಥಿತಿ ನಿರ್ಮಾಣವಾಗಿದೆ.
ಏಪ್ರಿಲ್ 22ರಂದು ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ 100 ಉಗ್ರರನ್ನು ಹತ್ಯೆ ಮಾಡಿತ್ತು.
ಇದಾದ ಬಳಿಕ ಪಾಕಿಸ್ತಾನವು ಭಾರತದ ಮೇಲೆ ಪ್ರತಿ ದಾಳಿ ಶುರು ಮಾಡಿತ್ತು, ಗಡಿಗಳ ಉದ್ದಕ್ಕೂ ಗುಂಡಿನ ದಾಳಿ ನಡೆಸಿದ್ದು, ಅನೇಕ ನಾಗರಿಕರನ್ನು ಹತ್ಯೆ ಮಾಡಿತ್ತು, ಹೀಗಾಗಿ ಕೋಪಗೊಂಡ ಭಾರತ ಮತ್ತೆ ಪಾಕ್ ವಿರುದ್ಧ ದಾಳಿಗೆ ನಿಂತಿದೆ.
ಇನ್ನೂ ಈ ವಿಚಾರವಾಗಿ ನಟಿ ಐಶ್ವರ್ಯಾ ರಾಜೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಐಶ್ವರ್ಯಾ ರಾಜೇಶ್ ಅವರು ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಮೊದಲಿಗೆ ಅವರು ಭಾರತೀಯ ಸೇನೆಗೆ ಧನ್ಯವಾದ ಅರ್ಪಿಸಿದ್ದಾರೆ. ‘ಇಡೀ ರಾಷ್ಟ್ರವೇ ನಿಶ್ಚಿಂತೆಯಿಂದ ಮಲಗಿರುವಾಗ ಭಾರತದ 15 ನಗರಗಳನ್ನು ಕಾಪಾಡಿದ್ದಕ್ಕಾಗಿ ಭಾರತದ ಸೇನೆಗೆ ಧನ್ಯವಾದ. ನಾವು ಬದುಕಿರುವುದಕ್ಕೆ ನೀವೇ ಕಾರಣ’ ಎಂದು ಅವರು ಹೇಳಿದ್ದಾರೆ. ಆದರೆ ಮತ್ತೊಂದು ಸ್ಟೋರಿಯಲ್ಲಿ ಯುದ್ಧ ಬೇಡ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
‘ಪ್ರಜಾಪ್ರಭುತ್ವ ರಾಷ್ಟ್ರವಾದ ನಾವು ಸಂಘರ್ಷದ ಬದಲಿಗೆ ಶಾಂತಿ ನೆಲೆಸಲಿ ಎಂದು ಭಾರತ ಮತ್ತು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸೋಣ. ಯುದ್ಧದಿಂದ ಎರಡೂ ದೇಶಗಳಲ್ಲಿ ಹಾನಿ ಮತ್ತು ನೋವು ಆಗುತ್ತದೆ ಅಷ್ಟೇ. ರಾಷ್ಟ್ರೀಯತೆ ಯಾವುದೇ ಆಗಿರಲಿ, ಒಟ್ಟಾಗಿ ನಿಂತು ಹೊಂದಾಣಿಕೆಯನ್ನು ಪ್ರತಿಪಾದಿಸೋಣ’ ಎಂದು ಐಶ್ವರ್ಯಾ ರಾಜೇಶ್ ಬರೆದುಕೊಂಡಿದ್ದಾರೆ.
‘ಪ್ರತಿಭಾವಂತ ವ್ಯಕ್ತಿಗಳು, ಸೈನಿಕರು ಹಾಗೂ ಅಮಾಯಕ ಜನರ ಸಾವನ್ನು ನಾವು ಭರಿಸಲು ಸಾಧ್ಯವಿಲ್ಲ. ನಾವೆಲ್ಲ ಜಾಗೃತಿ ಮೂಡಿಸೋಣ. ಇನ್ನೊಂದು ಯುದ್ಧವನ್ನು ತಪ್ಪಿಸಲು ರಾಜತಾಂತ್ರಿಕ ಪ್ರಯತ್ನಗಳನ್ನು ಬೆಂಬಲಿಸೋಣ. ಈ ಸಂದೇಶವನ್ನು ಹರಡಿರಿ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಂಚಿಕೊಂಡಿರುವ ಐಶ್ವರ್ಯಾ ರಾಜೇಶ್ ಅವರು #NoToWar ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






