ಮೂಢನಂಬಿಕೆಗೆ ಬಲಿಯಾದ ಮಹಿಳೆ: ಮಕ್ಕಳಾಗಲಿಲ್ಲ ಎಂದು ಮಾಂತ್ರಿಕನ ಬಳಿ ಹೋಗಿ ಶವವಾಗಿ ಬಂದಳು..!

ಮೂಢನಂಬಿಕೆಯಿಂದ ಮಹಿಳೆಯೊಬ್ಬಳು ತನ್ನ ಜೀವವನ್ನೇ ಕಳೆದುಕೊಂಡ ದಾರುಣ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಅಜಮ್ಗಢ ಮೂಲದ 35 ವರ್ಷದ ಅನುರಾಧಾ ಎಂಬ ಮಹಿಳೆ, ಮದುವೆಯಾಗಿ ಹತ್ತು ವರ್ಷವಾದರೂ ಸಂತಾನವಾಗದ ಹಿನ್ನೆಲೆ ಮನಸ್ಸಿನಲ್ಲಿ ಕಿಂಚಿತ್ ಖಿನ್ನತೆಯಿಂದ ಬಳಲುತ್ತಿದ್ದರು.
ಈ ಹಿನ್ನೆಲೆಯಲ್ಲಿ ಕುಟುಂಬದವರು ಅವಳನ್ನು ಒಬ್ಬ ಮಾಂತ್ರಿಕನ ಬಳಿ ಕರೆದೊಯ್ದು, ಪೂಜೆ ಮಾಡಿಸಿದರೆ ಮಕ್ಕಳಾಗುತ್ತದೆ ಎಂದು ನಂಬಿದ್ದರು. ಮಾಂತ್ರಿಕ 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರೂ, ಮೊದಲ ಹಂತವಾಗಿ ₹2,200 ಮುಂಗಡ ಹಣವಾಗಿ ಪಡೆದಿದ್ದಾನೆ.
ಜುಲೈ 6ರಂದು ಅನುರಾಧಾ ತನ್ನ ಅತ್ತೆಯ ಮನೆಯಿಂದ ಆಚರಣೆಯ ಸಲುವಾಗಿ ತವರು ಮನೆಗೆ ಬಂದಿದ್ದಾಗ, ಮಾಂತ್ರಿಕನ ಹೆಂಡತಿ ಮತ್ತು ಸಹಾಯಕರು ಆಕೆಯ ಮೇಲೆ ಹಿಂಸೆ ನಡೆಸಿದ್ದಾರೆ. ಕೂದಲು ಎಳೆದು ಉಸಿರುಗಟ್ಟಿಸಿ, ಚರಂಡಿ ಹಾಗೂ ಶೌಚಾಲಯದ ನೀರು ಕುಡಿಸಿರುವ ವಿಷಯವೂ ಹೊರಬಿದ್ದಿದೆ.
ಮಹಿಳೆಯ ಆರೋಗ್ಯ ತೀವ್ರ ಹದಗೆಟ್ಟಾಗ ಮನೆಮಂದಿ ಈ ಆಚರಣೆ ನಿಲ್ಲಿಸುವಂತೆ ಕೇಳಿಕೊಂಡರೂ ಮಾಂತ್ರಿಕನ ತಂಡ ಒಪ್ಪಿರಲಿಲ್ಲ. ಕೊನೆಗೆ ಸ್ಥಿತಿ ಬಿಕ್ಕಟ್ಟಾಗಿದಾಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಮಹಿಳೆ ಈಗಾಗಲೇ ಮೃತರಾದರೆಂದು ಘೋಷಿಸಿದರು.
ಈ ಬಗ್ಗೆ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಮಾಂತ್ರಿಕ ಮತ್ತು ಅವನ ಸಹಾಯಕರು ಪರಾರಿಯಾಗಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






