Operation Sindoor: ಭಾರತ-ಪಾಕ್ ಸಂಘರ್ಷ: IPL ಟೂರ್ನಿಯ ಪಂದ್ಯಾವಳಿಗಳು ಮುಂದೂಡಿಕೆ!

ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 58 ನೇ ಪಂದ್ಯವನ್ನು ರದ್ದುಗೊಳಿಸಲಾಯಿತು. ಈ ಪಂದ್ಯವು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿತ್ತು. ಪಂದ್ಯದ ಸಮಯದಲ್ಲಿ, ಕ್ರೀಡಾಂಗಣದಲ್ಲಿನ ಫ್ಲಡ್ ಲೈಟ್‌ಗಳಲ್ಲಿ ಒಂದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.
ಇದಾದ ನಂತರ, ಭದ್ರತಾ ಕಾರಣಗಳಿಗಾಗಿ ಧರ್ಮಶಾಲಾದಲ್ಲಿ ವಿದ್ಯುತ್ ಕಡಿತಗೊಳಿಸಲಾಯಿತು. ಅಂತಿಮವಾಗಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಆಟಗಾರರು ಮತ್ತು ಪ್ರೇಕ್ಷಕರನ್ನು ತಕ್ಷಣವೇ ಕ್ರೀಡಾಂಗಣದಿಂದ ಸ್ಥಳಾಂತರಿಸಲಾಯಿತು.
ಇದೀಗ ಆಟಗಾರರ ಸುರಕ್ಷತೆಯಿಂದ ಇಂದಿನಿಂದ ನಡೆಯಬೇಕಿದ್ದ ಎಲ್ಲ ಐಪಿಎಲ್ ಪಂದ್ಯಾವಳಿಗಳನ್ನು ಬಿಸಿಸಿಐ ರದ್ದುಗೊಳಿಸಿದೆ. ಇದೇ ಮೇ 25ರ ತನಕ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆಯಬೇಕಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವುದರಿಂದ ಎಲ್ಲ ಪಂದ್ಯಗಳನ್ನು ಅನಿರ್ದಿಷ್ಟಾವಧಿಯಾಗಿ ಮುಂದೂಡಲಾಗಿದೆ.
ಇಂದು ನಡೆದ ಮಹತ್ವದ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಅದರಂತೆ ಇಂದಿನಿಂದ ನಡೆಯುವ ಎಲ್ಲಾ ಪಂದ್ಯಗಳನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದೆ. ಸದ್ಯ ಪ್ಲೇ ಆಫ್ಸ್ ಸೇರಿ 18 ಪಂದ್ಯಗಳು ಬಾಕಿ ಉಳಿದಿವೆ.
ವಿದೇಶಿ ಆಟಗಾರರ ಭದ್ರತೆಯ ದೃಷ್ಟಿಯಿಂದ BCCI ಯಾವುದೇ ಸವಾಲುಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ದೇಶದಲ್ಲಿ ನಡೆಯಬೇಕಿದ್ದ ಈ ಬಾರಿಯ IPL ಟೂರ್ನಿಯನ್ನು ಸಂಪೂರ್ಣವಾಗಿ ಮುಂದೂಡಿಕೆ ಮಾಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






