ಶಾಲೆಯ ಮೇಲೆ ವಾಯುಪಡೆಯ ತರಬೇತಿ ವಿಮಾನ ಪತನ: ಒರ್ವ ಸಾವು, ಹಲವರಿಗೆ ಗಾಯ

ಢಾಕಾ: ಬಾಂಗ್ಲಾದೇಶದ ವಾಯುಪಡೆಯ ಎಫ್-7 ಬಿಜಿಐ ತರಬೇತಿ ಜೆಟ್ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ತಪ್ಪಿ ಪತನಗೊಂಡಿರುವ ಘಟನೆ ರಾಜಧಾನಿ ಢಾಕಾದ ಉತ್ತರ ಭಾಗದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರೇಟ್ (ISPR) ನೀಡಿದ ಮಾಹಿತಿ ಪ್ರಕಾರ, ಸೋಮವಾರ ಮಧ್ಯಾಹ್ನ 1:06ರ ಹೊತ್ತಿಗೆ ವಿಮಾನವು ಟೇಕಾಫ್ ಆದ ಕೆಲವೇ ಹೊತ್ತಿನಲ್ಲೇ, ಢಾಕಾದ ಮೈಲ್ಸ್ಟೋನ್ ಶಾಲೆ ಮತ್ತು ಕಾಲೇಜಿನ ಕ್ಯಾಂಟೀನ್ ಪ್ರದೇಶದ ಮೇಲಕ್ಕೆ ನುಗ್ಗಿದೆ. ಹಠಾತ್ ಸಂಭವಿಸಿದ ಈ ಪತನದಿಂದ ಶಾಲಾ ಆವರಣದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ. ವಿಮಾನದ ಪೈಲಟ್ ಬದುಕುಳಿದಿರುವ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಘಟನೆಯ ಹಿನ್ನೆಲೆ ಹಾಗೂ ಕಾರಣವನ್ನು ತಿಳಿಯಲು ವಾಯುಪಡೆ ಭದ್ರತಾ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






