IPL 2025: RCBಗೆ ತವರಿನಲ್ಲೇ ಅವಮಾನ: ಹ್ಯಾಟ್ರಿಕ್ ಸೋಲಿಗೆ ಕ್ಯಾಪ್ಟನ್ ಪಾಟೀದಾರ್ ಕೊಟ್ಟ ಕಾರಣ ಏನು ಗೊತ್ತಾ..?

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆರ್ಸಿಬಿ ಮತ್ತೊಂದು ಮುಖಭಂಗ ಎದುರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆರ್ಸಿಬಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಅದರಲ್ಲೂ ಬ್ಯಾಟ್ ಟು ಬ್ಯಾಕ್ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆರ್ಸಿಬಿ ಒಂದು ಹಂತದಲ್ಲಿ 63 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಟಿಮ್ ಡೇವಿಡ್ ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಆರ್ಸಿಬಿ ತಂಡವು ನಿಗದಿತ 14 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿತು.
96 ರನ್ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿದರೂ, ಆ ಬಳಿಕ ಚೇತರಿಸಿಕೊಂಡಿತು. ಇದರ ನಡುವೆ ಕಣಕ್ಕಿಳಿದ ನೆಹಾಲ್ ವಧೇರಾ ಅತ್ಯುತ್ತಮ ಬ್ಯಾಟಿಂಗ್ನೊಂದಿಗೆ ಅಜೇಯ 33 ರನ್ ಬಾರಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ಪಡೆ 12.1 ಓವರ್ಗಳಲ್ಲಿ 98 ರನ್ ಬಾರಿಸಿ 5 ವಿಕೆಟ್ಗಳ ಗೆಲುವು ದಾಖಲಿಸಿತು.
ಈ ಸೋಲಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ತವರು ಮೈದಾನದಲ್ಲಿ ಅತ್ಯಧಿಕ ಪಂದ್ಯಗಳಲ್ಲಿ ಸೋತ ತಂಡವೆಂಬ ಅಪಕೀರ್ತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ.
ಈ ಸೋಲಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ನಮ್ಮ ಪರಾಜಯಕ್ಕೆ ಪಿಚ್ ಕಾರಣ ಎಂದಿದ್ದಾರೆ. ಏಕೆಂದರೆ ಈ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಹೀಗಾಗಿ ನಮ್ಮ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದ್ದಾರೆ.
ಇಂತಹ ಪಿಚ್ನಲ್ಲಿ ಜೊತೆಯಾಟವಾಡುವುದು ಮುಖ್ಯವಾಗಿತ್ತು. ಆದರೆ ನಮ್ಮಿಂದ ಅದು ಸಾಧ್ಯವಾಗಲಿಲ್ಲ. ನಾವು ಬೇಗನೆ ವಿಕೆಟ್ಗಳನ್ನು ಕಳೆದುಕೊಂಡ ಪರಿಣಾಮ, ಉತ್ತಮ ಜೊತೆಯಾಟ ಮೂಡಿಬಂದಿರಲಿಲ್ಲ. ಇದು ಮುಂಬರುವ ಪಂದ್ಯಗಳೀಗೆ ನಮಗೆ ಪಾಠ ಎಂದು ರಜತ್ ಪಾಟಿದಾರ್ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅವರನ್ನು ಕಣಕ್ಕಿಳಿಸದಿರುವ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ತಂಡದಲ್ಲಿ ಪಡಿಕ್ಕಲ್ ಬದಲಿಗೆ ಬೇರೆಯವನರನ್ನು ಕಣಕ್ಕಿಳಿಸಿದ್ದೆವು. ಆದರೆ ಅದು ಪರಿಣಾಮಕಾರಿಯಾಗಲಿಲ್ಲ ಎಂದರು.
ಇದಾಗ್ಯೂ ಪಂಜಾಬ್ ಕಿಂಗ್ಸ್ ವಿರುದ್ಧ ನಮ್ಮ ಬೌಲರ್ಗಳನ್ನು ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ನಮ್ಮ ಬೌಲಿಂಗ್ ವಿಭಾಗವು ತುಂಬಾ ಚೆನ್ನಾಗಿ ಆಡಿದ್ದರು. ಇದುವೇ ಈ ಪಂದ್ಯದ ನಮ್ಮ ಪ್ಲಸ್ ಪಾಯಿಂಟ್. ಬೌಲಿಂಗ್ಗೆ ಪಿಚ್ ಕೂಡ ಸಹಕಾರಿಯಾಗಿತ್ತು. ಇದು ಆರಂಭದಲ್ಲಿ ಬೌಲರ್‌ಗಳಿಗೆ ಸಹಾಯ ಮಾಡಿದೆ.
ಆದರೆ ನಮ್ಮ ಬೌಲರ್ಗಳ ವಿರುದ್ಧ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗೆಲುವಿನ ಕೀರ್ತಿ ಅವರಿಗೆ ಸಲ್ಲುತ್ತದೆ. ವಿಕೆಟ್ ಏನೇ ಇರಲಿ, ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಿ ಗೆಲುವಿನ ಸ್ಕೋರ್ ಗಳಿಸಬೇಕಿತ್ತು. ಮುಂದಿನ ಪಂದ್ಯಕ್ಕೂ ಮುನ್ನ ಬ್ಯಾಟಿಂಗ್ ವಿಭಾಗದಲ್ಲಿನ ಕೆಲವು ತಪ್ಪುಗಳನ್ನು ನಾವು ಸರಿಪಡಿಸಬೇಕಿದೆ ಎಂದು ರಜತ್ ಪಾಟಿದಾರ್ ಇದೇ ವೇಳೆ ಅಭಿಪ್ರಾಯಪಟ್ಟರು.
ನಿಮ್ಮ ಪ್ರತಿಕ್ರಿಯೆ ಏನು?






