ಪಂಚಮಸಾಲಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು - ಮಠದಿಂದ ಶ್ರೀಗಳನ್ನು ಹೊರಹಾಕಲು ಚಿಂತನೆ

ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ಆರೋಗ್ಯದಲ್ಲಿ ಇಂದು ಏರುಪೇರು ಉಂಟಾಗಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಬೆಳಗಿನ ಜಾವ ಸ್ವಾಮೀಜಿಗೆ ತಲೆನೋವು, ವಾಂತಿ ಹಾಗೂ ಎದೆನೋವು ಕಾಣಿಸಿಕೊಂಡು, ತಕ್ಷಣ ಭಕ್ತರು ಅವರನ್ನು ನಗರದ ಕೆರೂಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪ್ರಸ್ತುತ ಅವರನ್ನು ತುರ್ತು ನಿಗಾ ಘಟಕದಲ್ಲಿ ಪಾರಿವೀಕ್ಷಣೆಯಲ್ಲಿಟ್ಟಿದ್ದಾರೆ.
ಇತ್ತೀಚೆಗಷ್ಟೇ ಪೀಠಕ್ಕೆ ಬೀಗ ಹಾಕಲಾಗಿದ್ದ ಪ್ರಕರಣದಿಂದ ಶ್ರೀಗಳು ಭಾವುಕವಾಗಿ ನೊಂದಿದ್ದಿದ್ದು, ಮುಖಂಡರ ಎದುರಲ್ಲೇ ಕಣ್ಣೀರಿಟ್ಟಿದ್ದರು. ಈ ಮನೋಭಾವನೆಯೊತ್ತಡವೂ ಅವರ ಆರೋಗ್ಯ ಹದಗೆಡಲು ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಇನ್ನೊಂದೆಡೆ ಶಾಸಕ ವಿಜಯಾನಂದ ಕಾಶಪ್ಪನವರ್ ಸುದ್ದಿಗೋಷ್ಠಿ ನಡೆಸಿ, ಕೂಡಲಸಂಗಮದ ಪಂಚಮಸಾಲಿ ಮಠದಿಂದ ಬಸವ ಜಯ ಮೃತ್ಯುಂಜಯ ಶ್ರೀಗಳನ್ನು ಹೊರಹಾಕಲು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದಿಂದ ಜಯಮೃತ್ಯುಂಜಯ ಶ್ರೀಗಳನ್ನು ಹೊರಹಾಕಲು ಟ್ರಸ್ಟ್ ಚಿಂತನೆ ನಡೆಸುತ್ತಿದೆ. ಕೂಡಲಸಂಗಮಪೀಠದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು. ಇನ್ನೂ ಸ್ವಾಮೀಜಿ ಶೀಘ್ರವೇ ಗುಣಮುಖರಾಗಲಿ ಎಂದು ಭಕ್ತರು ಪ್ರಾರ್ಥನೆ ಮಾಡ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






