ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್’ಗೆ 63ನೇ ಹುಟ್ಟುಹಬ್ಬ: ಅಭಿಮಾನಿಗಳಿಂದ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮ

ಬೆಂಗಳೂರು: ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಇಂದು 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಈ ವಿಶೇಷ ಸಂದರ್ಭವನ್ನು ಅಭಿಮಾನಿಗಳು ಭರ್ಜರಿಯಾಗಿ ಆಚರಿಸಿದ್ದಾರೆ.
ಶಿವಣ್ಣನ ಹುಟ್ಟುಹಬ್ಬದಂದು, ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಅವರ ನಿವಾಸದ ಬಳಿ ಜಮಾಯಿಸಿದ್ದರು. ಮಧ್ಯರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಅಭಿಮಾನಿಗಳೊಂದಿಗೆ ಪತ್ನಿ ಗೀತಾ ಜೊತೆ ಮನೆಯವರ ನಡುವೆ ಕೇಕ್ ಕಟ್ ಮಾಡಿ, ಶಿವರಾಜ್ ಕುಮಾರ್ ಅವರು ಕುಟುಂಬದೊಂದಿಗೆ ಈ ವಿಶೇಷ ಕ್ಷಣವನ್ನು ಸೆಲೆಬ್ರೇಟ್ ಮಾಡಿಕೊಂಡರು. ಮನೆ ಬಳಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸಿದ್ದರು.
ಹುಟ್ಟುಹಬ್ಬದ ದಿನದ ವಿಶೇಷವಾಗಿ, ನಟ ಶಿವಣ್ಣ ಅಭಿನಯದ ಮುಂದಿನ ಚಿತ್ರ ‘666 ಆಪರೇಷನ್’ ನಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಡ್ರೀಮ್ ಥಿಯೇಟರ್ ನಿರ್ಮಾಣದಲ್ಲಿರುವ ಈ ಚಿತ್ರದಲ್ಲಿ, ಶಿವಣ್ಣ ಸೂಟ್ ಧರಿಸಿ, ಕೈಯಲ್ಲಿ ವಿಂಟೇಜ್ ರಿವಾಲ್ವರ್ ಹಿಡಿದಿರುವ ಸ್ಟೈಲಿಷ್ ಲುಕ್‌ನಲ್ಲಿ ತೀಕ್ಷ್ಣ ನೋಟದೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಅಭಿಮಾನಿಗಳಲ್ಲಿ ಕಾತುರ ಮೂಡಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






