ಯುವ ಎಡಗೈ ದಾಂಡಿಗನ ಯಶಸ್ವಿಯ ಕ್ಷಣ! 2024 ರಲ್ಲಿ ಜೈಸ್ವಾಲ್ ಫಾರ್ಮ್ ಹೇಗಿದೆ?

ಬಾಕ್ಸಿಂಡ್ ಡೇ ಟೆಸ್ಟ್ ಪಂದ್ಯವನ್ನು ಎದುರಾಳಿ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ 4ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ಸೋಲಾಗಿದೆ. 184 ರನ್‌ಗಳಿಂದ ಟೀಂ ಇಂಡಿಯಾ ಸೋತಿದೆ. ಇನ್ನೂ 2024 ಕಳೆದು 2025 ಬರಮಾಡಿಕೊಳ್ಳೋದಕ್ಕೆ ಇನ್ನೊಂದು ದಿನ ಬಾಕಿ ಇದೆ. ಹೀಗಿರುವಾಗಲೇ ಕ್ರಿಕೆಟ್ ಟೆಸ್ಟ್ ನಲ್ಲಿ ಯಶಸ್ವಿ ಜೈಸ್ವಾಲ್ ಅವರು 2024 ರಲ್ಲಿ ಯಶಸ್ಸಿನ ಶಿಖರವೇರಿದ್ದಾರೆ.
ಈ ವರ್ಷ ಭಾರತ ತಂಡ ಆಡಿದ 15 ಟೆಸ್ಟ್ ಪಂದ್ಯಗಳಲ್ಲಿ 8 ಜಯ ಸಾಧಿಸಿದರೆ, 6 ಸೋಲು ಕಂಡಿದೆ. ಈ ಸಿಹಿ-ಕಹಿ ನಡುವೆ ಯಶಸ್ಸಿನ ಶಿಖರವೇರಿದ್ದು ಯುವ ದಾಂಡಿಗ ಯಶಸ್ವಿ ಜೈಸ್ವಾಲ್. ಏಕೆಂದರೆ ಈ ವರ್ಷ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಯಶಸ್ವಿ ಜೈಸ್ವಾಲ್.
ಟೀಮ್ ಇಂಡಿಯಾ ಪರ ಈ ವರ್ಷ ಟೆಸ್ಟ್‌ನಲ್ಲಿ 29 ಇನಿಂಗ್ಸ್ ಆಡಿರುವ ಯಶಸ್ವಿ ಒಟ್ಟು 1478 ರನ್ ಕಲೆಹಾಕಿದ್ದಾರೆ.
ಈ ವರ್ಷ ಭಾರತ ಪರ ಅತ್ಯಧಿಕ ಟೆಸ್ಟ್ ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲೂ ಯಶಸ್ವಿ ಜೈಸ್ವಾಲ್ (3 ಸೆಂಚುರಿ) ಅಗ್ರಸ್ಥಾನದಲ್ಲಿದ್ದಾರೆ.
ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪರ 2024 ರಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರ್ ಕೂಡ ಯಶಸ್ವಿ ಜೈಸ್ವಾಲ್. ಒಟ್ಟು 9 ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.
2024 ಟೆಸ್ಟ್‌ನಲ್ಲಿ ಅತೀ ಹೆಚ್ಚು ಫೋರ್ ಬಾರಿಸಿದ ದಾಖಲೆ ಕೂಡ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿದೆ. ಈ ವರ್ಷ 29 ಇನಿಂಗ್ಸ್ಗಳಲ್ಲಿ ಜೈಸ್ವಾಲ್ 168 ಫೋರ್ಗಳನ್ನು ಬಾರಿಸಿದ್ದಾರೆ.
ಈ ವರ್ಷದ ಟೆಸ್ಟ್ ಕ್ರಿಕೆಟ್ನ ಸಿಕ್ಸರ್ ಕಿಂಗ್ ಕೂಡ ಜೈಸ್ವಾಲ್. 15 ಟೆಸ್ಟ್ ಪಂದ್ಯಗಳಲ್ಲಿ 36 ಸಿಕ್ಸ್ ಸಿಡಿಸಿ ಯಶಸ್ವಿ ಜೈಸ್ವಾಲ್ ಈ ದಾಖಲೆ ಬರೆದಿದ್ದಾರೆ.
ಟೀಮ್ ಇಂಡಿಯಾ ಪರ ಟೆಸ್ಟ್‌ನಲ್ಲಿ ಈ ವರ್ಷ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದ ಆಟಗಾರ ಯಶಸ್ವಿ ಜೈಸ್ವಾಲ್. 29 ಇನಿಂಗ್ಸ್ಗಳಲ್ಲಿ ಜೈಸ್ವಾಲ್ 54.74ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
2024 ರಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್‌ನಲ್ಲಿ ಗರಿಷ್ಠ ಸ್ಕೋರ್ ಬಾರಿಸಿದ್ದು ಕೂಡ ಯಶಸ್ವಿ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಅಜೇಯ 214* ರನ್ ಬಾರಿಸಿದ್ದರು.
ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿರುವುದು ಕೂಡ ಯಶಸ್ವಿ ಜೈಸ್ವಾಲ್. 4 ಪಂದ್ಯಗಳಲ್ಲಿ 8 ಇನಿಂಗ್ಸ್ ಆಡಿರುವ ಜೈಸ್ವಾಲ್ ಒಟ್ಟು 359 ರನ್ ಕಲೆಹಾಕಿದ್ದಾರೆ.
ಇನ್ನು ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ 1400+ ರನ್ ಗಳಿಸಿದ ವಿಶ್ವದ 2ನೇ ಬ್ಯಾಟರ್ ಯಶಸ್ವಿ ಜೈಸ್ವಾಲ್. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಇಂಗ್ಲೆಂಡ್ನ ಜೋ ರೂಟ್ (1556 ರನ್ಸ್).
ಹಾಗೆಯೇ ಈ ವರ್ಷ ಭಾರತದ ಪರ ಟೆಸ್ಟ್‌ನಲ್ಲಿ 1000+ ರನ್ ಕಲೆಹಾಕಿದ ಏಕೈಕ ಬ್ಯಾಟರ್ ಯಶಸ್ವಿ ಜೈಸ್ವಾಲ್.
ಯಶಸ್ವಿ ಜೈಸ್ವಾಲ್ ಅವರನ್ನು ಹೊರತುಪಡಿಸಿ ಭಾರತದ ಯಾವುದೇ ಬ್ಯಾಟರ್ 900 ರನ್ಗಳ ಗಡಿದಾಟಿಲ್ಲ ಎಂಬುದು ವಿಶೇಷ.
ಅಂದರೆ ಯಶಸ್ವಿ ಜೈಸ್ವಾಲ್ 2024 ರಲ್ಲಿ ಹೊಸ ಭರವಸೆ ಮೂಡಿಸಿರುವುದು ಸ್ಪಷ್ಟ. ಅದು ಕೂಡ ತಮ್ಮ 23ನೇ ವಯಸ್ಸಿನಲ್ಲಿ. ಹೀಗಾಗಿ 2024 ಯಶಸ್ವಿ ಜೈಸ್ವಾಲ್ ಪಾಲಿನ ಯಶಸ್ವಿ ವರ್ಷ ಎನ್ನಬಹುದು.
ನಿಮ್ಮ ಪ್ರತಿಕ್ರಿಯೆ ಏನು?






