5 ಹುಲಿಗಳ ಸಾವಿನ ಕೇಸ್’ಗೆ ಬಿಗ್ ಟ್ವಿಸ್ಟ್: ಕೊನೆಗೂ ಸಿಕ್ಕಿಬಿದ್ದ ಆರೋಪಿಗಳು..! ಹುಲಿಗಳಿಗೆ ವಿಷ ಹಾಕಿದ್ದು ಯಾಕೆ ಗೊತ್ತಾ.?

ಚಾಮರಾಜನಗರ: ಮೃತ ಹಸುವಿನ ವಿಷ ಮಿಶ್ರಿತ ಮಾಂಸ ಸೇವಿಸಿ ತಾಯಿ ಹುಲಿ ಮತ್ತು ಅದರ ನಾಲ್ಕು ಮರಿ ಸೇರಿ ಐದು ಹುಲಿಗಳು ಒಂದೇ ದಿನ ಮೃತಪಟ್ಟಿವೆ. ಹುಲಿಗಳ ನಾಡೆಂದೇ ಪ್ರಖ್ಯಾತಿಯಾದ ಚಾಮರಾಜನಗರ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಮಿಣ್ಯಂ ಅರಣ್ಯದಲ್ಲಿ ಹುಲಿಗಳು ಮೃತಪಟ್ಟಿರುವುದು ಕಂಡುಬಂದಿದ್ದು, ಒಂದೇ ದಿನ ಐದು ಹುಲಿಗಳು ಸಾವನ್ನಪ್ಪಿರುವ ದುರಂತ ದೇಶದಲ್ಲೇ ಮೊದಲು. ಐದು ಹುಲಿಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಮೂವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಹುಲಿಗಳ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಹಂತದಲ್ಲಿ ಅವುಗಳು ವಿಷಪ್ರಾಶನದಿಂದ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಕರಣದ ಕೂಲಂಕಷ ತನಿಖೆ ಕೈಗೊಂಡು, ಹನೂರು ತಾಲೂಕಿನ ಕೊಪ್ಪ ಗ್ರಾಮದ ಕೋನಪ್ಪ, ಮಾದರಾಜು ಹಾಗೂ ನಾಗರಾಜ ಎಂಬ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಹುಲಿ ಮತ್ತು ಹಸುವಿನ ಅಂಗಾಂಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಾದ ಅಲಿಯಾಸ್ ಮಾದುರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ಬಲಿ ಪಡೆದಿತ್ತು. ತನ್ನ ನೋವನ್ನು ನಾಗರಾಜ್ ಬಳಿ ಹೇಳಿಕೊಂಡು ಮಾದ ಕಣ್ಣೀರಿಟ್ಟಿದ್ದ. ಬಳಿಕ ಹಸು ಕೊಂದ ಹುಲಿ ಕೊಲ್ಲಲು ಇಬ್ಬರು ನಿರ್ಧರಿಸಿದ್ದರು. ಹಾಗಾಗಿ ಹುಲಿ ಕೊಲ್ಲಲು ಕ್ರಿಮಿನಾಶಕ ಕೂಡ ತಂದಿದ್ದರು. ಹುಲಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪಿಗಳಿಗೆ ಕೂನಪ್ಪ ನೆರವು ನೀಡಿದ್ದರು.
ನಾಗರಾಜ್ ಮೃತ ಹಸುವಿಗೆ ಕ್ರಿಮಿನಾಶಕ ಹಾಕಿ ಬಂದಿದ್ದ. ಮರುದಿನ ವಿಷಪೂರಿತ ಹಸುವಿನ ಮಾಂಸ ತಿಂದು ಹುಲಿ ಮರಿಗಳು ಸತ್ತಿದ್ದವು. ಇತ್ತ ಹುಲಿಗಳು ಸತ್ತಿದ್ದನ್ನು ನೋಡಿ ಮಾದುರಾಜು ಸಂತಸ ಪಟ್ಟಿದ್ದ. ವಿಚಾರಣೆ ವೇಳೆ ಆರೋಪಿಗಳು ಒಂದೊಂದೆ ಸತ್ಯವನ್ನು ಬಾಯ್ಬಿಡುತ್ತಿದ್ದಾರೆ.
ಪ್ರಕರಣ ಬೆನ್ನಲ್ಲೇ ಮಾದ ಅಲಿಯಾಸ್ ಮಾದುರಾಜು ಪರಾರಿಯಾಗಿದ್ದ. ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೊಪ್ಪ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಮಾದುರಾಜು ನನ್ನು ಬಂಧಿಸಲಾಗಿದೆ. ಈ ಹಿಂದೆ ಹುಲಿ, ಚಿರತೆ ದಾಳಿಗೆ ಬಲಿಯಾದ ಜಾನುವಾರುಗಳ ಮಾಲೀಕರನ್ನು ಹಾಗೂ ಕಾಡಿಗೆ ಹಸು ಬಿಡುವವರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






