IPL 2025: ಸತತ ಸೋಲಿನಿಂದ ಕಂಗೆಟ್ಟಿರೋ CSK: ಎಂಎಸ್ ಧೋನಿ ಹೇಳಿದ್ದೇನು..?

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ್ದ ಸಿಎಸ್ಕೆ ತಂಡವು ಆ ಬಳಿಕ ಸತತ ಐದು ಮ್ಯಾಚ್ಗಳಲ್ಲೂ ಮುಗ್ಗರಿಸಿದೆ. ಇನ್ನೂ ಕೆಕೆಆರ್ ವಿರುದ್ಧ 8 ವಿಕೆಟ್‌ಗಳ ಸೋಲಿನ ನಂತರ, ಎಂಎಸ್ ಧೋನಿ ಮಾತನಾಡಿದ್ದಾರೆ.
ಕೆಲವು ಪಂದ್ಯಗಳಲ್ಲಿ ತಂಡವು ತನ್ನ ಘನತೆಗೆ ತಕ್ಕಂತೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಬ್ಯಾಟಿಂಗ್ ಮಾಡುವಾಗ ತಮ್ಮ ತಂಡವು ಅಂದುಕೊಂಡಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ ಎಂದು ಧೋನಿ ಒಪ್ಪಿಕೊಂಡಿದ್ದಾರೆ. ವಿಕೆಟ್‌ಗಳು ಬೇಗನೆ ಬಿದ್ದಾಗ, ತಂಡದ ಮೇಲೆ ಒತ್ತಡ ಹೆಚ್ಚಾಗುತ್ತದೆ.
ಈ ಪಂದ್ಯದಲ್ಲಿ ಸಿಎಸ್‌ಕೆ ತಂಡಕ್ಕೆ ಒಂದೇ ಒಂದು ದೊಡ್ಡ ಜೊತೆಯಾಟ ಸಿಗಲಿಲ್ಲ. ಪವರ್ ಪ್ಲೇನಲ್ಲಿ ತಂಡವು ಕೇವಲ 31 ರನ್ ಗಳಿಸಲಷ್ಟೆ ಸಾಧ್ಯವಾಯಿತು ಎಂದು ಧೋನಿ ಹೇಳಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡಿದ ಧೋನಿ, ರಾಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಇಬ್ಬರೂ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು. ಆದರೆ ಈ ಪಂದ್ಯದಲ್ಲಿ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಐಪಿಎಲ್ನಲ್ಲಿ ಸತತ 5 ಮ್ಯಾಚ್ಗಳಲ್ಲಿ ಸೋತ ತಂಡಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಕಳೆದ 15 ವರ್ಷಗಳಲ್ಲಿ ಸಿಎಸ್ಕೆ ತಂಡವು ಒಮ್ಮೆಯೂ ಸತತ ಐದು ಪಂದ್ಯಗಳಲ್ಲಿ ಸೋಲಿನ ರುಚಿ ನೋಡಿರಲಿಲ್ಲ. ಆದರೆ ಈ ಬಾರಿ ಚೆಪಾಕ್ ಮೈದಾನದಲ್ಲೇ ಯೆಲ್ಲೊ ಪಡೆಯ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ನಿಮ್ಮ ಪ್ರತಿಕ್ರಿಯೆ ಏನು?






