'ಕ್ಷಮಿಸು ಅಮ್ಮಾ, ಐ ಮಿಸ್ ಯೂ': ತಾಯಿಯನ್ನು ಕೊಂದು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ ಗುಜರಾತ್ ಯುವಕ

ಆಗಸ್ಟ್ 31, 2024 - 15:08
 0  13
'ಕ್ಷಮಿಸು ಅಮ್ಮಾ, ಐ ಮಿಸ್ ಯೂ': ತಾಯಿಯನ್ನು ಕೊಂದು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ ಗುಜರಾತ್ ಯುವಕ
FOCUS KARNATAKA Murder

'ಕ್ಷಮಿಸು ಅಮ್ಮಾ, ಐ ಮಿಸ್ ಯೂ': ತಾಯಿಯನ್ನು ಕೊಂದು ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ ಗುಜರಾತ್ ಕಿರಾತಕ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ತನ್ನ ಹೆತ್ತ ತಾಯಿಯನ್ನೇ ಕೊಂದ 21 ವರ್ಷದ ವ್ಯಕ್ತಿಯೊಬ್ಬ, ಶವದೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಘಟನೆ ವರದಿಯಾಗಿದೆ.

ಈ ಘಟನೆ ಕುರಿತು ಪೊಲೀಸರಿಗೆ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ ಬಳಿಕ ಇದು ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ನೀಲೇಶ್ ಗೋಸಾಯಿ ತನ್ನ ತಾಯಿಯ ಮೃತದೇಹದ ಪಕ್ಕ ಕುಳಿತುಕೊಂಡಿದ್ದ.

ರಾಜ್‌ಕೋಟ್‌ನ ಭಗತ್ ಸಿಂನ್ಹಜಿ ಗಾರ್ಡನ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಈ ಹತ್ಯೆ ನಡೆದಿದೆ. ಮೃತ ಮಹಿಳೆಯನ್ನು 48 ವರ್ಷದ ಜ್ಯೋತಿಬೆನ್ ಗೋಸಾಯಿ ಎಂದು ಗುರುತಿಸಲಾಗಿದೆ.

ಈ ಕೊಲೆಯನ್ನು ತಾನೇ ಮಾಡಿರುವುದಾಗಿ ವಿಚಾರಣೆ ವೇಳೆ ನೀಲೇಶ್ ಗೋಸಾಯಿ ಒಪ್ಪಿಕೊಂಡಿದ್ದಾನೆ. ಚಾಕುವಿನಿಂದ ಮೊದಲು ತಾಯಿ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾನೆ. ಜ್ಯೋತಿಬೆನ್ ಗೋಸಾಯಿ ಅವರು ಪ್ರತಿ ಹೋರಾಟ ನಡೆಸಿ ಚಾಕುವನ್ನು ಕಿತ್ತು ಎಸೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಬ್ಲಾಂಕೆಟ್ ಒಂದನ್ನು ಬಳಸಿ ಆಕೆಯ ಉಸಿರುಗಟ್ಟಿಸಿ ಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಅಪರಾಧ ಎಸಗಿದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಅಮ್ಮನ ಫೋಟೋವನ್ನು ಆತ ಹಂಚಿಕೊಂಡಿದ್ದಾನೆ. "ಕ್ಷಮಿಸು ಅಮ್ಮಾ, ನಾನು ನಿನ್ನನ್ನು ಕೊಂದೆ. ಐ ಮಿಸ್ ಯೂ. ಓಂ ಶಾಂತಿ" ಎಂದು ಅದರಲ್ಲಿ ಬರೆದಿದ್ದಾನೆ. ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ಆತ, "ನಾನು ನನ್ನ ಅಮ್ಮನನ್ನು ಕೊಲೆ ಮಾಡಿದೆ. ನನ್ನ ಜೀವನಕ್ಕಾದ ನಷ್ಟ. ಕ್ಷಮಿಸು ಅಮ್ಮಾ. ಓಂ ಶಾಂತಿ. ಮಿಸ್ ಯೂ ಅಮ್ಮಾ" ಎಂದು ಬರೆದುಕೊಂಡಿದ್ದಾನೆ

ಜ್ಯೋತಿ ಬೆನ್ ಅವರು ಕೆಲವು ವರ್ಷಗಳಿಂದ ತೀವ್ರ ಪ್ರಮಾಣದ ಮಾನಸಿಕ ಅಸ್ವಸ್ಥತೆ ಎದುರಿಸುತ್ತಿದ್ದರು. ಈ ಕಾರಣದಿಂದಾಗಿ ಮಗನ ಜತೆ ನಿರಂತರವಾಗಿ ವಾಗ್ವಾದ ಹಾಗೂ ದೈಹಿಕ ಘರ್ಷಣೆಗಳು ನಡೆಯುತ್ತಿದ್ದವು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಘಟನೆ ನಡೆದ ದಿನದಂದು ನೀಲೇಶ್ ಮತ್ತು ಜ್ಯೋತಿಬೆನ್ ತೀವ್ರ ಮಾತಿನ ಚಕಮಕಿ ನಡೆದಿತ್ತು. ಇದು ಹಿಂಸೆಗೆ ತಿರುಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನೀಲೇಶ್ ಜನಿಸಿದ ಒಂದು ವರ್ಷದಲ್ಲಿಯೇ ಜ್ಯೋತಿಬೆನ್ ಅವರ ವೈವಾಹಿಕ ಸಂಬಂಧ ಮುರಿದುಬಿದ್ದಿತ್ತು. ಸುಮಾರು 20 ವರ್ಷಗಳಿಂದ ಅವರು ನೀಲೇಶ್ ಜತೆಗೆ ವಾಸವಿದ್ದರು. ಅವರಿಗೆ ಉಳಿದ ಮಕ್ಕಳ ಜತೆಗೆ ಹೆಚ್ಚು ಸಂಪರ್ಕ ಇರಲಿಲ್ಲ.

ಜ್ಯೋತಿಬೆನ್ ಅವರ ಮಾಜಿ ಪತಿ ಹಾಗೂ ಅವರ ಇತರೆ ಮಕ್ಕಳು ಅವರ ಮೃತದೇಹವನ್ನು ಸ್ವೀಕರಿಸಲು ಹಾಗೂ ಅಂತ್ಯಕ್ರಿಯೆಯ ಜವಾಬ್ದಾರಿ ನಿರ್ವಹಿಸಲು ನಿರಾಕರಿಸಿದ್ದರು. ಹೀಗಾಗಿ ಪೊಲೀಸರು ಖುದ್ದು ಪ್ರಕರಣ ದಾಖಲಿಸಿಕೊಂಡು, ತಾವೇ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುವ ಸ್ಥಿತಿ ಎದುರಾಗಿತ್ತು.

ಆರೋಪಿ ನೀಲೇಶ್ ಈಗ ಪೊಲೀಸರ ವಶದಲ್ಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಮುಂದುವರಿದಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow