ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್; ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ!

ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಾದ ಬೆಂಗಳೂರು, ಹಾಸನ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಕೊಡಗುಗಳಲ್ಲಿ ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಇಲಾಖೆಯು ದಾಳಿ ನಡೆಸಿದ್ದು, ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿತ ಆಸ್ತಿಗಳ ಮೇಲೆ ಪರಿಶೀಲನೆ ನಡೆಸುತ್ತಿದೆ.
ಬೆಂಗಳೂರು ನಗರದಲ್ಲಿ ಎರಡು ಸ್ಥಳಗಳಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್ ಮನೆ ಮೇಲೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಟಿಹೆಚ್ಒ ಡಾ. ವೆಂಕಟೇಶ್ ಮನೆ ಮತ್ತು ಕ್ಲಿನಿಕ್ ಮೇಲೆ ತನಿಖೆ ನಡೆದಿದೆ.
ಹಾಸನ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಅವರ ಹೌಸಿಂಗ್ ಬೋರ್ಡ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದ ಫಾರ್ಮ್ಹೌಸ್ನಲ್ಲಿಯೂ ಪರಿಶೀಲನೆ ನಡೆದಿದೆ.
ಈ ದಾಳಿಗಳು ಅಧಿಕಾರಿಗಳು ಪಡೆದಿರುವ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ಲಭ್ಯವಿರುವ ಮಾಹಿತಿ ಆಧಾರಿತವಾಗಿವೆ. ಲೋಕಾಯುಕ್ತ ಎಸ್ಪಿ ಸ್ನೇಹ ಮತ್ತು ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ್ ನೇತೃತ್ವದ ತಂಡಗಳು ಈ ದಾಳಿಗಳನ್ನು ಮುಂದುವರೆಸಿದ್ದು, ಪರಿಶೀಲನೆ ಇನ್ನೂ ಮುಂದುವರಿದಿದೆ.
ನಿಮ್ಮ ಪ್ರತಿಕ್ರಿಯೆ ಏನು?






