ಇನ್ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ನ್ಯೂಸ್ ಹಬ್ಬಿಸಿದ್ರೆ ಜೈಲೂಟ ಫೀಕ್ಸ್!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಸಮಾಜದಲ್ಲಿ ಕೋಮು ಕ್ಷೋಭೆಗೆ ಪ್ರಯತ್ನಿಸುತ್ತಿರುವವ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಅದಲ್ಲದೆ ರಾಜ್ಯ ಸರ್ಕಾರವು ಕೂಡ ಮಹತ್ವದ ನಿರ್ಧಾರ ಕೈಗೊಳ್ಳಲು ತೀರ್ಮಾನ ಮಾಡಿದೆ. ದ್ವೇಷ ಭಾಷಣ, ಸುಳ್ಳು ಸುದ್ದಿ ತಡೆಗೆ ಪ್ರತ್ಯೇಕ ವಿಧೇಯಕ ಜಾರಿಗೆ ತರಲು ಮುಂದಾಗಿದೆ. ಹಾಗಾದ್ರೆ, ಇದು ಏನು ಹೇಳುತ್ತೆ? ಎಷ್ಟು ಜೈಲು, ದಂಡ? ಇಲ್ಲಿದೆ ವಿವರ.
ದ್ವೇಷ ಭಾಷಣವು ದೇಶದ ಜ್ಯಾತ್ಯತೀತ ಸಂರಚನೆಗೆ ಹಾನಿ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಜತೆಗೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಹಲವೆಡೆ ದ್ವೇಷ ಭಾಷಣ, ಪ್ರಚೋದನೆಗಳು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕೆಲವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಸಹ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ದ್ವೇಷ ಭಾಷಣ ಹಾಗೂ ಸುಳ್ಳು ಸುದ್ದಿ ತಡೆಗೆ ಪ್ರತ್ಯೇಕ ವಿಧೇಯಕ ಮಂಡನೆಗೆ ಈಗಾಗಲೇ ಕಳೆದ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಇದಕ್ಕೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ. ಕರ್ನಾಟಕ ತಪ್ಪು ಮಾಹಿತಿ ರಚನೆ ಮತ್ತು ನಕಲಿ ಸುದ್ದಿ ನಿಷೇಧ ಮಸೂದೆ 2025 ರ ಅಡಿಯಲ್ಲಿ, ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಡುಬಂದಲ್ಲಿ ಸರ್ಕಾರವು ಏಳು ವರ್ಷಗಳವರೆಗೆ ಶಿಕ್ಷೆ ಅಥವಾ 10 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಪ್ರಕಟಣೆಗಳಲ್ಲಿ ತಪ್ಪು ಮಾಹಿತಿ ನೀಡಿದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ. ಈ ಅಪರಾಧಗಳನ್ನು ಸಂಜ್ಞೇಯವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಇದು ಜಾಮೀನು ರಹಿತ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಹಾಗೂ ದ್ವೇಷ ಭಾಷಣ ಮಾಡುವವರು ಎಚ್ಚರಿಕೆಯಿಂದ ಇರಬೇಕು.
ನಿಮ್ಮ ಪ್ರತಿಕ್ರಿಯೆ ಏನು?






