ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ : ಸುಪ್ರೀಂನಲ್ಲಿ ನಟ ಕಮಲ್ ಹಾಸನ್’ಗೆ ಭಾರಿ ಹಿನ್ನಡೆ.!

ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಮಣಿಯದ ನಟ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಲು ನಿರಾಕರಿಸಿದ್ದರು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಮಲ್ ಹಾಸನ್ ಅವರು ಹೈಕೋರ್ಟ್ನಲ್ಲಿ ಸಿನಿಮಾ ಬಿಡುಗಡೆಗೆ ಭದ್ರತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಕಮಲ್ ಹಾಸನ್ ಮನವಿಗೆ ಗರಂ ಆದ ಹೈಕೋರ್ಟ್ ಮೊದಲು ಕ್ಷಮೆ ಕೇಳಿದ್ದಾರಾ? ಎಂದು ಪ್ರಶ್ನಿಸಿ ತರಾಟೆ ತೆಗೆದುಕೊಂಡಿತ್ತು.
ಇದೀಗ 'ಥಗ್ ಲೈಫ್' ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಿಷೇಧಿಸಿರುವ ಕ್ರಮ ಪ್ರಶ್ನಿಸಿ ಹಾಗೂ ಚಲನಚಿತ್ರ ಪ್ರದರ್ಶನಕ್ಕೆ ರಕ್ಷಣೆ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಮಹೇಶ್ ರೆಡ್ಡಿ ಎಂಬವರು ಅರ್ಜಿ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ವಿಭಾಗೀಯ ಪೀಠಕ್ಕೆ, ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಲಾಗಿಲ್ಲ, ಬಿಡುಗಡೆಗೆ ಬೆದರಿಕೆ ಇದೆ. ಆದ್ದರಿಂದ ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆರಂಭದಲ್ಲಿ ಈ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವುದಕ್ಕೆ ಅವಕಾಶವಿಲ್ಲ. ಅಗತ್ಯವಿದ್ದರೆ, ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿಯು ವಿಚಾರಣಾ ಹಂತದಲ್ಲಿದೆ. ಅಲ್ಲಿಯೇ ವಿಷಯವನ್ನು ಪ್ರಸ್ತಾಪಿಸಹುದು ಎಂದು ತಿಳಿಸಿತು. ಅಲ್ಲದೆ, ಬಳಿಕ ಅರ್ಜಿಯನ್ನು ಪರಿಗಣಿಸಿದ ನ್ಯಾಯಪೀಠ, ಶುಕ್ರವಾರ ವಿಚಾರಣೆ ನಡೆಸುವುದಾಗಿ ಹೇಳಿ, ಮುಂದೂಡಿಕೆ ಮಾಡಿತು.
ವಾದ ಮುಂದುವರೆಸಿದ ವಕೀಲರು, ಚಿತ್ರವನ್ನು ಪ್ರದರ್ಶನ ಮಾಡಿದರೆ ಚಿತ್ರಮಂದಿರಗಳಿಗೆ ಹಾನಿ ಮಾಡುವುದಾಗಿ ಕೆಲವು ಸಂಘಟನೆಗಳು ಎಚ್ಚರಿಕೆ ನೀಡಿವೆ. ಇದೊಂದು ಕರ್ನಾಟಕ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರವಾಗಿದೆ. ಆದ್ದರಿಂದ ಚಿತ್ರಮಂದಿರಗಳಿಗೆ ರಕ್ಷಣೆ ನೀಡಬೇಕು ಎಂದು ಕೋರಿದರು.
ಅಲ್ಲದೆ, ಚಿತ್ರ ನಿರ್ಮಾಣ ಸಂಸ್ಥೆಯು ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದೆ. ಆದರೆ, ಚಿತ್ರಬಿಡುಗಡೆ ಸಂಬಂಧ ಯಾವುದೇ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವುದಾಗಿ ವಿವರಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






