ಗೂಡ್ಸ್ ರೈಲಿಗೆ ಮೈಸೂರು ದರ್ಭಾಂಗ ಎಕ್ಸ್ಪ್ರೆಸ್ ರೈಲು ಡಿಕ್ಕಿ: ಹೊತ್ತಿ ಉರಿದ ಬೋಗಿ

ತಿರುವಳ್ಳೂರಿನಲ್ಲಿ ಮೈಸೂರು - ದರ್ಭಾಂಗ ಎಕ್ಸ್ಪ್ರೆಸ್ ರೈಲು ಮತ್ತು ಗೂಡ್ಸ್ ರೈಲು ನಡುವೆ ಭೀಕರ ಅಪಘಾತ ಸಂಭವಿಸಿದೆ. ನಾಲ್ಕು ಎಸಿ ಕೋಚ್ಗಳು ಹಳಿ ತಪ್ಪಿ, ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಕ್ಷಣಾ ಕಾರ್ಯ ಮುಂದುವರೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ಮೈಸೂರಿನಿಂದ ದರ್ಭಾಂಗ್ ಮಾರ್ಗವಾಗಿ ಹೋಗುತ್ತಿದ್ದ ಭಾಗಮತಿ ಎಕ್ಸ್ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಸ್ಥಳಕ್ಕೆ ಶೀಘ್ರದಲ್ಲೇ ರಕ್ಷಣಾ ಪಡೆ ಆಗಮಿಸಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರೈಲು ಸಂಖ್ಯೆ 12578 ಮೈಸೂರು-ದರ್ಭಾಂಗ ಬಾಗಮತಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಲೂಪ್ ಲೈನ್ನಲ್ಲಿ ಪ್ರವೇಶಿಸಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ನಿಂತಿದ್ದ ಗೂಡ್ಸ್ ಟ್ರೇನ್ ಗೆ ಪ್ರಯಾಣಿಕ ರೈಲು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈಲಿನಿಂದ 6 ಬೋಗಿಗಳು ಪ್ರತ್ಯೇಕಗೊಂಡ ಮಾಹಿತಿ ಲಭ್ಯವಾಗಿದೆ. ಮಧ್ಯಾಹ್ನ 1.50ಕ್ಕೆ ಬೆಂಗಳೂರಿನಿಂದ ನಾಗಪುರಕ್ಕೆ ರೈಲು ಹೊರಟಿತ್ತು. ಕರ್ನಾಟಕದಿಂದ 45 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಕೆಲವರು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಟ್ರೇನ್ ನಲ್ಲಿದ್ದ ಬೆಂಗಳೂರಿಗರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






