ಫಿಟ್ನೆಸ್ ಟೆಸ್ಟ್’ನಲ್ಲಿ ಫೆಲ್: ಆಸ್ಟ್ರೇಲಿಯಾ ಪ್ರವಾಸಕ್ಕೆ ಶ್ರೇಯಂಕಾ, ಪ್ರಿಯಾ ಔಟ್!

ಆಸ್ಟ್ರೇಲಿಯಾ ಪ್ರವಾಸಕ್ಕೆ ಸನ್ನದ್ಧವಾಗಿರುವ ಭಾರತ ಎ ವನಿತಾ ಕ್ರಿಕೆಟ್ ತಂಡಕ್ಕೆ ಪ್ರವಾಸ ಆರಂಭಕ್ಕೂ ಮುನ್ನವೇ ಆಘಾತದ ಸುದ್ದಿ ಎದುರಾಗಿದೆ. ಮೊದಲಿಗೆ ಆಯ್ಕೆಗೊಂಡಿದ್ದ ಕನ್ನಡತಿ ಶ್ರೇಯಂಕಾ ಪಾಟೀಲ್ ಹಾಗೂ ಪ್ರಿಯಾ ಮಿಶ್ರಾ ಫಿಟ್ನೆಸ್ ಟೆಸ್ಟ್ನಲ್ಲಿ ಅನುತ್ತೀರ್ಣರಾಗಿರುವ ಹಿನ್ನೆಲೆ, ಅವರನ್ನು ತಂಡದಿಂದ ಹೊರಗಿಡಲಾಗಿದೆ.
ಈಗಾಗಲೇ ಕಳೆದ ತಿಂಗಳು ಭಾರತ ವನಿತಾ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಏಕದಿನ ಮತ್ತು ಟಿ20 ಸರಣಿಗಳನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿತ್ತು. ಟಿ20 ಸರಣಿಯನ್ನು 2-1 ಹಾಗೂ ಏಕದಿನ ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡು, ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ನೆಲದಲ್ಲೇ ಮೆರೆದಿತ್ತು.
ಈ ಯಶಸ್ಸಿನ ಬಳಿಕ ಇದೀಗ ಭಾರತ ಎ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಜ್ಜಾಗುತ್ತಿದೆ. ಆರಂಭದಲ್ಲಿ ಶ್ರೇಯಂಕಾ ಹಾಗೂ ಪ್ರಿಯಾ ಅವರನ್ನು ಈ ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ, ಬಿಸಿಸಿಐ ಅವರ ಲಭ್ಯತೆ ಫಿಟ್ನೆಸ್ ಅವಲಂಬಿತವಾಗಿರುತ್ತದೆ ಎಂದು ಮೊದಲಿನಿಂದಲೂ ಸ್ಪಷ್ಟಪಡಿಸಿತ್ತು.
ಅವರಿಬ್ಬರೂ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರು. ಇದೀಗ ಪ್ರವಾಸಕ್ಕೆ ಮುನ್ನ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಅವರಿಬ್ಬರೂ ಅತೃಪ್ತ ಫಲಿತಾಂಶ ತಂದುಕೊಟ್ಟ ಹಿನ್ನೆಲೆ, ಅವರನ್ನು ತಂಡದಿಂದ ಕೈಬಿಡಲಾಗಿದೆ. ಬಿಸಿಸಿಐ ಶೀಘ್ರದಲ್ಲೇ ಅವರ ಬದಲಿಗೆ ಪರ್ಯಾಯ ಆಟಗಾರ್ತಿಯರ ಹೆಸರನ್ನು ಘೋಷಿಸುವ ನಿರೀಕ್ಷೆಯಿದೆ.
ನಿಮ್ಮ ಪ್ರತಿಕ್ರಿಯೆ ಏನು?






