ಪ್ರಜ್ವಲ್ ರೇವಣ್ಣನಿಗೆ ಜೈಲೇ ಗತಿ.! ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಮನೆಗೆಲಸ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತೊಮ್ಮೆ ವಜಾಗೊಂಡಿದೆ. ಹೊಳೆನರಸೀಪುರ ಅತ್ಯಾಚಾರ ಪ್ರಕರಣದ ಸಂಬಂಧ, ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇದೇ ಎರಡನೇ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಇಂದು ಜಾಮೀನು ನೀಡಲು ನಿರಾಕರಿಸಿ ಸ್ಪಷ್ಟ ಆದೇಶ ಹೊರಡಿಸಿದೆ. ಈ ಮೂಲಕ 14 ತಿಂಗಳಿಂದ ಜೈಲಿನಲ್ಲಿರುವ ಪ್ರಜ್ವಲ್ಗೆ ಮತ್ತೆ ನಿರಾಸೆಯಾಗಿದೆ. ಈಗಾಗಲೇ ಅವರು ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ, ಎಲ್ಲವೂ ವಜಾಗೊಂಡಿತ್ತು. ನಂತರ, ಹೈಕೋರ್ಟ್ ನೀಡಿದ ಸೂಚನೆಯಂತೆ ಅವರು ಪುನಃ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಯಾಚಿಸಿದ್ದರು.
ಆರೋಪಿ ಪರ ವಕೀಲ ವಿಕ್ರಂ ಹುಯಿಲಗೋಳ ವಾದ ಮಂಡಿಸುತ್ತಾ, "ಪ್ರಜ್ವಲ್ ರೇವಣ್ಣ 14 ತಿಂಗಳಿಂದ ಬಂಧಿತರಾಗಿದ್ದಾರೆ. ಇದೇ ಪ್ರಕರಣದಲ್ಲಿ ಇತರ ಆರೋಪಿ ಎಚ್.ಡಿ. ರೇವಣ್ಣ ವಿರುದ್ಧ ತನಿಖೆಗೆ ಹೈಕೋರ್ಟ್ ತಡೆಯಿದೆ. ಹಾಗಾಗಿ ಪ್ರಜ್ವಲ್ಗೂ ಜಾಮೀನು ನೀಡಬೇಕು," ಎಂದು ಮನವಿ ಮಾಡಿದರು. ಎಸ್ಐಟಿ ತನಿಖಾಧಿಕಾರಿಗಳ ಪರ ಸಾರ್ವಜನಿಕ ಅಭಿಯೋಜಕರು ತೀವ್ರ ವಾದ ಮಂಡಿಸಿದರು. ಎರಡೂ ಪಕ್ಷಗಳ ವಾದ ಆಲಿಸಿದ ನಂತರ ನ್ಯಾಯಾಲಯ, ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?






