Karnataka Bus Strike: ಖಾಸಗಿ ವಾಹನವಿದ್ರೂ ನೋ ಯೂಸ್: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ?

ಆಗಸ್ಟ್ 5, 2025 - 11:59
 0  17
Karnataka Bus Strike: ಖಾಸಗಿ ವಾಹನವಿದ್ರೂ ನೋ ಯೂಸ್: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ?

 

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಸಾರಿಗೆ ಬಂದ್​ ಎಫೆಕ್ಟ್ ಜನರಿಗೆ ತಟ್ಟಿದೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕೆಎಸ್​ಆರ್​ಟಿಸಿ ಸಾರಿಗೆ ನೌಕರರು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಸರ್ಕಾರ ಪ್ರಯಾಣಿಕರಿಗಾಗಿ ಖಾಸಗಿ ಬಸ್​ಗಳ ವ್ಯವಸ್ಥೆ ಮಾಡಿದೆ. ಆದ್ರೂ ಪ್ರಯೋಜನವಾಗಿಲ್ಲ.

ಮೈಸೂರು
ಮೈಸೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಗೆ ಈಗ ಖಾಸಗಿ ಬಸ್ ಗಳು ಎಂಟ್ರಿಯಾಗಿವೆ. ಮೈಸೂರಿನ ವಿವಿಧ ತಾಲೂಕು, ಮಂಡ್ಯ, ಚಾಮರಾಜನಗರ ಮತ್ತು ಬೆಂಗಳೂರಿಗೆ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಖಾಸಗಿ ಬಸ್‌ಗಳು ಅಧಿಕೃತ ವಾಗಿ ಸಬ್‌ ಅರ್ಬನ್‌ ನಿಲ್ದಾಣದ ಒಳ ಭಾಗದಿಂದಲೇ ಸಂಚಾರ ಆರಂಭಿಸಿವೆ.

 

ಹಾಸನ
ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬಸ್‌ಗಳು ರಸ್ತೆಗಿಳಿಯದೇ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲಸಕ್ಕೆ ತೆರಳುವವರು ಬಸ್‌ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಕೆಎಸ್‌ಆರ್‌ಟಿಸಿ ಘಟಕ-1 ಹಾಗೂ ಘಟಕ-2 ರಲ್ಲಿ 230 ಬಸ್‌ಗಳು ನಿಂತಿವೆ. ಅತ್ತ ಪ್ರಯಾಣಿಕರಿಗೆ ಹೊರೆ ತಪ್ಪಿಸಲು ಮುಂದಾಗಿರುವ ಖಾಸಗಿ ಬಸ್‌ಗಳು ನಿಲ್ದಾಣದ ಮುಂಭಾಗದಲೇ ನಿಂತಿವೆ. ತುರ್ತು ಅಗತ್ಯಗಳಿಗೆ ಜನ ಖಾಸಗಿ ಬಸ್‌ಗಳ ಮೊರೆ ಹೋಗುತ್ತಿದ್ದಾರೆ.

 

ಧಾರವಾಡ:
ಸಾರಿಗೆ ಸಂಸ್ಥೆ ನೌಕರರು ರಾಜ್ಯದಾದ್ಯಂತ ಮುಷ್ಕರ ನಡೆಸಿದ್ದು, ಧಾರವಾಡದಲ್ಲೂ ಈ ಮುಷ್ಕರದ ಬಿಸಿ ತಟ್ಟಿದೆ. ಸಾರಿಗೆ ಸಂಸ್ಥೆ ಬಸ್‌ಗಳು ಸೇರಿದಂತೆ ಬಿಆರ್‌ಟಿಎಸ್ ಸಂಸ್ಥೆಯ ಬಸ್‌ಗಳೂ ರಸ್ತೆಗಿಳಿದಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡುವಂತಾಗಿದೆ. ಬೇಂದ್ರೆ ನಗರ ಸಾರಿಗೆ ಮತ್ತು ಇತರ ಖಾಸಗಿ ವಾಹನಗಳು ಓಡಾಟ ನಡೆಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಧಾರವಾಡದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಬೀದರ್‌
ಇನ್ನೂ ಬೀದರ್‌ ಜಿಲ್ಲೆಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿದೆ. ಕಲಬುರಗಿ, ಹುಮ್ನಾಬಾದ್, ಭಾಲ್ಕಿ, ಹೈದ್ರಾಬಾದ್, ಸೇರಿದಂತೆ ಹಲವು ಕಡೆ ಹೋಗಲು ಬಸ್‌ಗಾಗಿ ಪ್ರಯಾಣಿಕರು ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಅತ್ತ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

ಬಾಗಲಕೋಟೆ:
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ಖಾಸಗಿ ಬಸ್‌ಗಳ ನಿಯೋಜನೆ ಸಹ ಮಾಡಿಕೊಳ್ಳದಿರುವ ಕಾರಣ, ಜನ ಕಂಗಾಲಾಗಿದ್ದಾರೆ. ಈ ನಡುವೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗದಿರಲು ಬಸ್‌ ನಿಲ್ದಾಣ ವ್ಯಾಪ್ತಿಯ 1 ಕಿಮೀ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ವಿಜಯಪುರ
ಜಿಲ್ಲೆಯಲ್ಲಿ ಬಸ್‌ ಬಂದ್‌ ಹಿನ್ನೆಲೆ ಜನ ಖಾಸಗಿ ವಾಹನಗಳ ಮೊರೆ ಹೋದ್ರೆ, ಕೆಲವರು ಸ್ವಂತ ವಾಹನಗಳ ಬಳಕೆಗೆ ಮುಂದಾಗಿದ್ದಾರೆ. ಪ್ರತಿನಿತ್ಯ ಜಿಲ್ಲೆಯಿಂದ ಸುಮಾರು 773 ಬಸ್‌ಗಳು ಸಂಚಾರ ಮಾಡುತ್ತವೆ. ಬೆಳಗ್ಗೆ ಟ್ರಿಪ್‌ಗೆ 131 ಬಸ್‌ ತೆರಳಬೇಕಿತ್ತು. ಆದ್ರೆ ಈವರೆಗೆ 43 ಬಸ್‌ಗಳಷ್ಟೇ ಸಂಚಾರಕ್ಕೆ ತೆರಳಿವೆ. ಅಲ್ಲದೇ 260 ಸಿಬ್ಬಂದಿ ಪೈಕಿ, 86 ಜನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲಾಡಳಿತದಿಂದ ಖಾಸಗಿ ಬಸ್‌ ವ್ಯವಸ್ಥೆ ಸಹ ಮಾಡದಿರುವ ಕಾರಣ ಜನ ನಿಲ್ದಾಣದಲ್ಲೇ ನಿಂತು ಕಂಗಾಲಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow