WPL 2025: ತವರಲ್ಲಿ ಸತತ ಸೋಲು: ಪ್ಲೇ ಆಫ್ ಪ್ರವೇಶಿಸಲು RCB ಲೆಕ್ಕಾಚಾರ ಹೀಗಿದೆ!

ಸಿಲಿಕಾನ್ ಸಿಟಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಡೆಲ್ಲಿ ತಂಡವು ಆರ್‌ಸಿಬಿ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದರೆ, ಇತ್ತ ಆರ್‌ಸಿಬಿ ಸತತ ನಾಲ್ಕನೇ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು. ವಾಸ್ತವವಾಗಿ ಆರ್‌ಸಿಬಿ ತನ್ನ ತವರಿನಲ್ಲಿ ಆಡಿದ ನಾಲ್ಕಕ್ಕೇ ನಾಲ್ಕು ಪಂದ್ಯಗಳಲ್ಲಿ ಸೋಲಿಗೆ ಕೊರಳೊಡ್ಡಿತು. ತಂಡದ ಈ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ವೈಫಲ್ಯ ಹಾಗೂ ಕಳಪೆ ನಾಯಕತ್ವ ಕಾರಣ ಎನ್ನಬಹುದು.
ಇನ್ನೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ WPL 2025 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದೆ. ಈವರೆಗೆ ಆಡಿದ 6 ಪಂದ್ಯಗಳಲ್ಲಿ RCB ಗೆದ್ದಿರುವುದು ಕೇವಲ 2 ಮ್ಯಾಚ್ ಮಾತ್ರ. ಅದರಲ್ಲೂ ಬೆಂಗಳೂರಿನಲ್ಲಿ ನಡೆದ ಕಳೆದ 4 ಪಂದ್ಯಗಳಲ್ಲೂ ಆರ್‌ಸಿಬಿ ತಂಡ ಮುಗ್ಗರಿಸಿದೆ.
ಸತತ ಸೋಲುಗಳೇ ಈಗ ಆರ್‌ಸಿಬಿ ಪಾಲಿಗೆ ಮುಳುವಾಗಿದೆ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಆಸೆಯನ್ನು ಜೀವಂತವಿರಿಸಬೇಕಿದ್ದರೆ ಮುಂದಿನ 2 ಪಂದ್ಯಗಳಲ್ಲೂ ಜಯ ಸಾಧಿಸಬೇಕು. ಈ ಮೂಲಕ 8 ಅಂಕಗಳನ್ನು ಪಡೆದರೂ ನೇರವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲು ಸಾಧ್ಯವಾಗುವುದಿಲ್ಲ.
ಬದಲಾಗಿ ಪ್ಲೇಆಫ್ ರೇಸ್ ನಲ್ಲಿರುವ ಮುಂಬೈ ಇಂಡಿಯನ್ಸ್, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಈ ಮೂರು ತಂಡಗಳ ಫಲಿತಾಂಶವನ್ನು ಅವಲಂಭಿಸಿ ಆರ್‌ಸಿಬಿ ಮುಂದಿನ ಹಂತಕ್ಕೇರಬಹುದು.
ಇಲ್ಲಿ ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ ವಿರುದ್ದ ಗೆದ್ದರೂ, ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಂದಿನ ಮೂರು ಪಂದ್ಯಗಳಲ್ಲಿ ಎರಡು ಸೋಲನ್ನು ಎದುರಿಸುವುದು ಎದುರು ನೋಡಬೇಕು. ಅಂದರೆ ಈ ಎರಡು ತಂಡಗಳು 8 ಅಂಕಗಳನ್ನು ಪಡೆಯದಿದ್ದರೆ, ಆರ್‌ಸಿಬಿ 8 ಪಾಯಿಂಟ್ಸ್ ನೊಂದಿಗೆ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸಬಹುದು.
ಒಂದು ವೇಳೆ ಮುಂಬೈ ಇಂಡಿಯನ್ಸ್, ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು 8 ಅಂಕಗಳನ್ನು ಪಡೆದುಕೊಂಡರೆ, ಆರ್‌ಸಿಬಿ ತಂಡವು ಮೂರನೇ ಸ್ಥಾನ ಪಡೆಯಲು ಉತ್ತಮ ನೆಟ್ ರನ್ ರೇಟ್ ಹೊಂದಿರಬೇಕಾಗುತ್ತದೆ. ಹೀಗಾಗಿ ಆರ್‌ಸಿಬಿ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಜಯದೊಂದಿಗೆ ನೆಟ್ ರನ್ ರೇಟ್ ಉತ್ತಮಗೊಳಿಸುವುದು ಕೂಡ ಅನಿವಾರ್ಯ. ಹೀಗಾದಲ್ಲಿ ಮಾತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂದಿನ ಹಂತಕ್ಕೇರಲಿದೆ
ನಿಮ್ಮ ಪ್ರತಿಕ್ರಿಯೆ ಏನು?






