ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ತೀರ್ಪಿನಲ್ಲಿ ಹೆಣ್ಣಿನ ಮಹತ್ವ ಸಾರುವ ಸಂಸ್ಕೃತ ಶ್ಲೋಕದ ಬಗ್ಗೆ ಉಲ್ಲೇಖ

ಬೆಂಗಳೂರು: ಕೆ.ಆರ್.ನಗರ ಮೂಲದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸುಮಾರು ನಾಲ್ಕು ತಿಂಗಳ ಕಾಲ ನಡೆದ ವಿಚಾರಣೆಯ ನಂತರ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.
ನ್ಯಾಯಾಲಯ ತನ್ನ ತೀರ್ಪಿನ ಆರಂಭದಲ್ಲೇ “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಂಬ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿ, ಮಹಿಳೆಯರ ಮಹತ್ವವನ್ನು ಸಾರಿದೆ. ಶ್ಲೋಕದ ಅರ್ಥ: “ಮಹಿಳೆಯರನ್ನು ಎಲ್ಲಿ ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ.” ಈ ಮೂಲಕ ನ್ಯಾಯಾಲಯವು ಸಾಮಾಜಿಕ ಅರಿವಿಗೆ, ನೈತಿಕ ಮೌಲ್ಯಗಳಿಗೆ ಒತ್ತು ನೀಡಿದೆ.
ಬಲವಂತದ ವಿರುದ್ಧ ನ್ಯಾಯದ ಗೆಲುವು
ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾಗಿದ್ದ ಗಂಭೀರ ಆರೋಪಗಳಲ್ಲಿ, ಮಹಿಳೆಯರ ಅಶ್ಲೀಲ ಚಿತ್ರ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ, ಭಯ ಸೃಷ್ಟಿಸಿರುವುದೂ ಸೇರಿದೆ. ಈ ಘಟನೆಗಳು 2024ರಲ್ಲಿ ಬೆಳಕಿಗೆ ಬಂದಿದ್ದು, ಪೆನ್‌ಡ್ರೈವ್ ಮೂಲಕ ವಿಡಿಯೋ ಹಂಚಿಕೆಯ ಪ್ರಕರಣವು ದೊಡ್ಡ ಚರ್ಚೆಗೆ ಕಾರಣವಾಯಿತು. ಪರಿಣಾಮವಾಗಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿತು. SIT ತನಿಖೆಯ ನಂತರ ಹಲವಾರು ದೂರುಗಳು ದಾಖಲಾಗಿದ್ದು, ಅವುಗಳಲ್ಲಿ ಒಂದು ಪ್ರಕರಣದಲ್ಲಿ ಈ ತೀರ್ಪು ಬಂದಿದೆ.
ದಂಡವೂ ವಿಧಿಸಿದ ನ್ಯಾಯಾಲಯ
ನ್ಯಾಯಾಲಯ ಪ್ರಜ್ವಲ್ ರೇವಣ್ಣ ಅವರಿಗೆ ₹11,60,000 ದಂಡ ವಿಧಿಸಿದ್ದು, ಈ ಪೈಕಿ ₹11,25,000ನ್ನು ಸಂತ್ರಸ್ತೆಗೆ ನೀಡುವಂತೆ ಆದೇಶಿಸಿದೆ. ಪ್ರಭಾವಶಾಲಿಯಾದ ರಾಜಕಾರಣಿಯೊಬ್ಬರ ವಿರುದ್ಧ ಇಂತಹ ಗಂಭೀರ ಶಿಕ್ಷೆ ವಿಧಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಪ್ರಾಮಾಣಿಕತೆ ಹಾಗೂ ಬಲವಂತದ ವಿರುದ್ಧ ಇರುವ ನಿಲುವನ್ನು ತೋರಿಸುತ್ತದೆ.
ಸಾಮಾಜಿಕ ಪ್ರತಿಕ್ರಿಯೆ
ಈ ತೀರ್ಪು ಜನಸಾಮಾನ್ಯರ ಹೃದಯ ಗೆದ್ದಿದ್ದು, "ಅಧಿಕಾರ, ಹಣವಿದ್ರೆ ಏನು ಬೇಕಾದರೂ ಮಾಡಬಹುದು" ಎಂಬ ಮನೋಭಾವನೆ ಹೊಂದಿದವರಿಗೆ ಇದು ಕಟ್ಟೆಚ್ಚರವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಮಹಿಳೆಯರಿಗೆ ನ್ಯಾಯ ದೊರೆತಿರುವ ಈ ತೀರ್ಪು, ಸಮಾಜದಲ್ಲಿ ಮಹಿಳೆಯರ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಬಲಪಡಿಸುವಂತಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






