ಭವಿಷ್ಯ ಹೇಳುವ ನೆಪದಲ್ಲಿ ಬ್ಲ್ಯಾಕ್ ಮ್ಯಾಜಿಕ್: ಯುವಕನಿಂದ ಹಣ, ವಾಚ್ ದೋಚಿ ಪರಾರಿ

ಬೆಂಗಳೂರು: ಭವಿಷ್ಯ ಹೇಳುವ ನೆಪದಲ್ಲಿ ಬ್ಲ್ಯಾಕ್ ಮ್ಯಾಜಿಕ್ ಮೂಲಕ ಯುವಕನನ್ನು ವಂಚಿಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸುಮಾರು ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ.
ಆನೇಕಲ್ ಚಂದಾಪುರ ಮುಖ್ಯ ರಸ್ತೆಯಲ್ಲಿರುವ ಐಮ್ಯಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುವ ಸಂತೋಷ್ ಎಂಬ ಯುವಕನಿಗೆ ಬಾಬಾ ವೇಷಧಾರಿಯೊಬ್ಬ ನಿಗೂಢ ರೀತಿಯಲ್ಲಿ ಮೋಸ ಮಾಡಿದ್ದಾನೆ. ಅಂಗಡಿಯಲ್ಲಿ ಒಬ್ಬನೇ ಇದ್ದ ಸಂತೋಷ್ ಬಳಿ ಬಂದು ಬಾಬಾ ವೇಷಧಾರಿ ಆಶೀರ್ವಾದ ಮಾಡುವ ನೆಪದಲ್ಲಿ ನವಿಲುಗರಿಯಿಂದ ತಲೆಗೆ ಸವರುತ್ತಾನೆ. ಬಳಿಕ ಭಿಕ್ಷೆ ಕೇಳಿದಾಗ, ಸಂತೋಷ್ ಅಂಗಡಿ ಮಾಲೀಕ ಇಲ್ಲ ಎಂದು ತಿಳಿಸಿದ್ದಾನೆ. ಆದರೆ ಬಾಬಾ ಒತ್ತಾಯಿಸಿದ್ದರಿಂದ 2 ರೂ. ನಾಣ್ಯ ನೀಡುತ್ತಾನೆ.
ವಿಚಿತ್ರವಾಗಿ, ಬಾಬಾ ನೀಡಿದ ನಾಣ್ಯವನ್ನು ರುದ್ರಾಕ್ಷಿಯಾಗಿ ತೋರಿಸುತ್ತಾನೆ. ನಂತರ ಸಂತೋಷ್ ನೀಡಿದ ₹100 ನೋಟನ್ನು "ಸಾಯಿಬಾಬಾ ವಿಗ್ರಹ"ವನ್ನಾಗಿ ಮಾಡಿದಂತೆ ತೋರುತ್ತಾನೆ. ಈ ಬ್ಲ್ಯಾಕ್ ಮ್ಯಾಜಿಕ್ ಮತ್ತು ನಿಗಾತಿ ಮಾತುಗಳಿಂದ ಭ್ರಮೆಗೆ ಒಳಗಾದ ಸಂತೋಷ್, ತನ್ನ ಬಳಿ ಇದ್ದ ₹1,500 ನಗದು ಹಾಗೂ ಕೈಯಲ್ಲಿದ್ದ ದುಬಾರಿ ವಾಚ್‌ನನ್ನೂ ಬಾಬಾಗೆ ನೀಡಿದ್ದಾನೆ.
ಈ ಕುರಿತು ಆಘಾತಕ್ಕೊಳಗಾದ ಸಂತೋಷ್, ಅಂಗಡಿಯಲ್ಲಿ ಇದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ತನ್ನ ಜೊತೆ ನಡೆದಿರುವ ಮೋಸ ಸ್ಪಷ್ಟವಾಗಿದ್ದು, ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾನೆ. ಸ್ಥಳೀಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾಗರಿಕರು ಇಂತಹ ಮೋಸದ ಬಾಬಾಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಅತ್ಯವಶ್ಯಕ. ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಅನಾಮಿಕ ವ್ಯಕ್ತಿಗಳು ಬಂದು ಆಶೀರ್ವಾದ, ಭವಿಷ್ಯವಾಣಿ, ರುದ್ರಾಕ್ಷಿ, ವಿಗ್ರಹದಂತೆ ತೋರಿಸುವ ಮೋಸಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






