“ದಾಸ”ನಿಗೆ ಮತ್ತೆ ಸೆರೆಮನೆ ವಾಸ: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 10 ಕ್ಕೆ ಮುಂದೂಡಲಾಯ್ತು. ಇನ್ನು ಪವಿತ್ರಾ ಗೌಡ ಹಾಗೂ ಇತರೆ ನಾಲ್ಕು ಆರೋಪಿಗಳ ಜಾಮೀನು ಅರ್ಜಿಯ ತೀರ್ಪು ಅಕ್ಟೋಬರ್ 14ಕ್ಕೆ ಪ್ರಕಟ ಆಗಲಿದೆ. ಕೊಲೆ ಪ್ರಕರಣದ ಆರೋಪಿಗಳಾದ ಎ2 ದರ್ಶನ್ ಹಾಗೂ ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ 57ನೇ ಸೆಷನ್ ಕೋರ್ಟ್‌ನಲ್ಲಿ ಇಂದು ನಡೆಯಿತು. ನಟ ದರ್ಶನ್ಗೆ ಮತ್ತೆ ನಿರಾಸೆ ಆಗಿದ್ದು, ಪ್ರತಿವಾದ ಆಲಿಸಿದ ನ್ಯಾಯಾಧೀಶರು ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದ್ದಾರೆ. ನಾಳೆ ದರ್ಶನ್ ಪರ ವಕೀಲರಾ ಸಿವಿ ನಾಗೇಶ್ , ಎಸ್ಪಿಪಿ ವಾದಕ್ಕೆ ಪ್ರತಿವಾದ ಮಂಡಿಸಲಿದ್ದಾರೆ.
ಸಿವಿ ನಾಗೇಶ್ರ ವಾದಕ್ಕೆ ಪ್ರತಿವಾದ ಮಂಡಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ನಿನ್ನೆ ಮಂಡಿಸಿದ ವಾದದಲ್ಲಿ ನಾಗೇಶ್ ಅವರು ಎತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ರೇಣುಕಾ ಸ್ವಾಮಿಯನ್ನು ಹೇಗೆ ಆರೋಪಿಗಳು ಟ್ರ್ಯಾಪ್ ಮಾಡಿದರು. ಹೇಗೆ ಆತನನ್ನು ಅಪಹರಣ ಮಾಡಿದರು, ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್ ಮತ್ತು ಗ್ಯಾಂಗ್ ಹೇಗೆ ರೇಣುಕಾ ಸ್ವಾಮಿ ಮೇಲೆ ಕ್ರೂರತೆ ಮೆರೆದರು ಎಂದು ನ್ಯಾಯಾಲಯದ ಮುಂದೆ ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದರು.
ಇಂದು (ಅಕ್ಟೋಬರ್ 09) ರಂದು ವಾದ ಮುಂದುವರೆಸಿದ ಪ್ರಸನ್ನ ಕುಮಾರ್ ಅವರು, ದರ್ಶನ್ ಮನೆಯಿಂದ ವಶಪಡಿಸಿಕೊಂಡ ವಸ್ತುಗಳು, ಅವುಗಳ ಮೇಲಿದ್ದ ರಕ್ತದ ಕಲೆ, ಸಾಕ್ಷ್ಯಗಳ ಹೇಳಿಕೆ ದಾಖಲಿಸಲು ವಿಳಂಬ ಆಗಿದ್ದಕ್ಕೆ ಕಾರಣ. ಎಫ್ಎಸ್ಎಲ್ ವರದಿಗಳು, ಅವುಗಳ ಸತ್ಯಾಸತ್ಯತೆ ಬಗ್ಗೆ ಎತ್ತಲಾಗಿದ್ದ ಅನುಮಾನಗಳಿಗೆ ಉತ್ತರಗಳನ್ನು ನೀಡಿದರು. ಜೊತೆಗೆ ಪ್ರಕರಣದಲ್ಲಿ ಎ13 ಆಗಿರುವ ದೀಪಕ್ ಗೆ ಜಾಮೀನು ನೀಡಬಹುದು ಆತನ ಮೇಲೆ ಕೊಲೆ ಆರೋಪವಾಗಲಿ, ಅಪಹರಣದ ಆರೋಪವಾಗಲಿ ಇಲ್ಲ. ಆತನ ಮೇಲೆ ಸಾಕ್ಷ್ಯ ನಾಶದ ಆರೋಪ ಇದೆ. ಅದು ಜಾಮೀನು ನೀಡಬಹುದಾದ ಆರೋಪ ಎಂದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಹಾಗೂ ಇತರ ಆರೋಪಿಗಳ ಬಂಧನವಾಗಿ ನಾಲ್ಕು ತಿಂಗಳಾಗಿದೆ. ಇನ್ನು ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ಕುರಿತ ಆದೇಶ ಅಕ್ಟೋಬರ್ 14ರಂದು ಪ್ರಕಟವಾಗಲಿದೆ. ಅದೇ ದಿನ ಎ8, ಎ11, ಎ12, ಎ13 ಜಾಮೀನು ಕುರಿತ ಆದೇಶ ಕೂಡ ಹೊರಬೀಳಲಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






