Kalaburgi: ರೇಣುಕಾಸ್ವಾಮಿ ಮಾದರಿಯಲ್ಲೇ ಮತ್ತೊಂದು ಅಟ್ಯಾಕ್! ಕಿಡ್ನಾಪ್ ಮಾಡಿ ಹತ್ಯೆ -ಕೊಲೆಗೆ ಕಾರಣವಾಗಿದ್ದೇ ಕಿರುಕುಳ?

ಕಲಬುರಗಿ: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಂತೆಯೇ, ಈಗ ಕಲಬುರಗಿಯಲ್ಲಿಯೂ ಚಲನಚಿತ್ರ ಶೈಲಿಯ ಹೃದಯವಿದ್ರಾವಕ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾಜಿ ಪ್ರೇಮಿಯ ಕಿರುಕುಳದಿಂದ ಬೇಸತ್ತು, ಆಕೆಯ ಪ್ರಿಯಕರ ಮತ್ತು ಗ್ಯಾಂಗ್ ಸೇರಿ ರಚಿಸಿರುವ ಸಂಚು, ಕೊನೆಗೆ ರಕ್ತದಾಟವಾಗಿ ಅಂತ್ಯ ಕಂಡಿದೆ.ಮೃತರು: ರಾಘವೇಂದ್ರ ನಾಯಕ್ (39), ಕಲಬುರಗಿ ನಿವಾಸಿ. ಆರೋಪಿಗಳು: ಅಶ್ವಿನಿ ಅಲಿಯಾಸ್ ತನು, ಆಕೆಯ ಪ್ರಿಯಕರ ಗುರುರಾಜ್ ಮತ್ತು ಅವರ ಸಹಚರರು.
ಮಾರ್ಚ್ 12ರಂದು ಈ ಗ್ಯಾಂಗ್, ರಾಘವೇಂದ್ರನನ್ನು ಅಪಹರಿಸಿ ಕೀರ್ತಿ ನಗರದಲ್ಲಿರುವ ಸ್ಮಶಾನಕ್ಕೆ ಕರೆದೊಯ್ದು ಮೊದಲಿಗೆ ಹಲ್ಲೆ ಮಾಡಿದ್ದು, ನಂತರ ಆತನ ಖಾಸಗಿ ಅಂಗಕ್ಕೆ ಗಂಭೀರವಾಗಿ ಹಾನಿ ಮಾಡಿ, ಕೊನೆಗೆ ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಆತನ ಮೃತದೇಹವನ್ನು ಕಾರಿನಲ್ಲಿ ರಾಯಚೂರಿನ ಶಕ್ತಿ ನಗರಕ್ಕೆ ಕೊಂಡೊಯ್ಯಲಾಗಿದ್ದು, ನದಿಗೆ ಎಸೆದಿದ್ದಾರೆ.
ಪೊಲೀಸರ ತನಿಖೆ ಪ್ರಕಾರ, ಅಶ್ವಿನಿ ಮತ್ತು ರಾಘವೇಂದ್ರ ಮಧ್ಯೆ ಕೆಲ ಕಾಲ ಅಕ್ರಮ ಸಂಬಂಧವಿದ್ದು, ನಂತರ ಆಕೆ ಗುರುರಾಜ್ ಎಂಬಾತನೊಂದಿಗೆ ಸಂಬಂಧ ಬೆಳೆಸಿದ್ದಳು. ಈ ಬೆಳವಣಿಗೆ ರಾಘವೇಂದ್ರನಿಗೆ ಅಸಹ್ಯವಾಗಿದ್ದು, ಬಳಿಕ ಅಶ್ವಿನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅಶ್ವಿನಿ ಹಾಗೂ ಗುರುರಾಜ್, ಗ್ಯಾಂಗ್ ಸೇರಿ ಕೊಲೆ ಯೋಚನೆ ಮಾಡಿರುವುದು ದೃಢಪಟ್ಟಿದೆ.
ಅಶ್ವಿನಿಯೂ ಸ್ಮಶಾನಕ್ಕೆ ಹೋಗಿ ಹಲ್ಲೆಯಲ್ಲಿ ತೊಡಗಿಕೊಂಡಿದ್ದಾಳೆ ಎಂಬ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಮಾರ್ಚ್ 12ರಿಂದ ರಾಘವೇಂದ್ರ ನಾಪತ್ತೆಯಾಗಿದ್ದು, ಆತನ ಪತ್ನಿ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಈ ದೂರು ಆಧಾರಿಸಿ ಆರಂಭವಾದ ತನಿಖೆ ಈಗ ತೀವ್ರ ರೂಪ ಪಡೆದು, ಪೊಲೀಸ್ ತಂಡ ಮೂವರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






