Mysore Dasara 2025: ಈ ಬಾರಿ ದಸರಾ ಮಹೋತ್ಸವ 11 ದಿನಗಳ ಕಾಲ ನಡೆಯಲಿದೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ ದಸರಾ ಕೊಂಚ ಮುಂಚಿತವಾಗಿ ಬಂದಿದ್ದು ಸೆಪ್ಟಂಬರ್ 22 ರಿಂದ ಅಕ್ಟೋಬರ್ 2ರವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರು. ವಿಧಾನಸೌಧದಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉನ್ನತ ಸಮಿತಿ ಸಭೆ ನಡೆಸಿದ ಬಳಿಕ ಪ್ರೆಸ್ ಬ್ರೀಫಿಂಗ್ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿಕ ಪಂಚಮಿ ನಿಮಿತ್ತ 2025ರ ದಸರಾ ಉತ್ಸವ 10 ದಿನಗಳ ಬದಲಿಗೆ 11 ದಿನಗಳ ಕಾಲ ನಡೆಯಲಿದೆ, 11 ದಿನಗಳ ದಸರಾ ಮಹೋತ್ಸವ ಮೊದಲ ಸಲವೇನೂ ಬಂದಿಲ್ಲ, ಇದಕ್ಕಿಂತ ಮೊದಲು 8 ಸಲ ಹೀಗಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೈಸೂರು ದಸರಾ ಉತ್ಸವ ವೀಕ್ಷಿಸಲು ವಿದೇಶಿಗರು ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಮಂದಿ ಬರುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಅನಾಹುತ ಸಂಭವಿಸದಂತೆ ಎಲ್ಲ ಕಡೆ ಮುನ್ನೆಚ್ಚರಿಕೆ ವಹಿಸಬೇಕು. ಅರಮನೆ ಮುಂಭಾಗದಲ್ಲಿ ಆಸನದ ವ್ಯವಸ್ಥೆಯನ್ನು ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಮಾಡಿ, ಜನದಟ್ಟಣೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಿ. ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಮೈಸೂರು ದಸರಾ ಉತ್ಸವ ನಡೆಯಲಿದೆ. ಸೆ.22ರಂದು ಬೆಳಗ್ಗೆ 10.10ಕ್ಕೆ ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾಗೆ ಚಾಲನೆ ನೀಡಲಾಗುವುದು. ಅಕ್ಟೋಬರ್ 2ರಂದು ದಸರಾ ಜಂಬೂ ಸವಾರಿ ನಡೆಯಲಿದೆ. ಸಂಜೆ 4.42ರಿಂದ 5.06ರ ನಡುವೆ ಜಂಬೂಸವಾರಿಗೆ ಪುಷ್ಪಾರ್ಚನೆ ನೆರವೇರುತ್ತದೆ. ಈ ಬಾರಿ 11 ದಿನ ದಸರಾ ಆಚರಣೆ ಮಾಡಲು ನಿರ್ಧರಿಸಿದ್ದೇವೆ. ಸ್ತಬ್ಧ ಚಿತ್ರಗಳಲ್ಲಿ ಗಾಂಧೀಜಿ ವಿಚಾರಧಾರೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ವಸ್ತು ಪ್ರದರ್ಶನ ಮಳಿಗೆಗಳು ಆರಂಭದ ದಿನವೇ ಮಳಿಗೆಗಳು ತುಂಬಬೇಕು. ದಸರಾ ಉತ್ಸವಕ್ಕೆ ಕಳೆದ ಬಾರಿ 40 ಕೋಟಿ ರೂ. ಖರ್ಚಾಗಿತ್ತು. ಯಾವುದೇ ಬಿಲ್ಗಳು ಬಾಕಿ ಇಲ್ಲ. ವಿದ್ಯುತ್ ಇಲಾಖೆಯೇ ದೀಪಾಲಂಕಾರ ವೆಚ್ಚ ಭರಿಸುತ್ತದೆ. ವಿಜೃಂಭಣೆಯ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಅಂತ ಸೂಚನೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






