ಬೆಂಗಳೂರಲ್ಲೊಂದು ಅಮಾನವೀಯ ಕೃತ್ಯ: ಮನೆಯಿಂದ ಹೊರ ಹಾಕಿದ ಅತ್ತೆ-ಮಾವ..! ಸೊಸೆ ಮಾಡಿದ್ದೇನು?

ಬೆಂಗಳೂರು:- ಬೆಂಗಳೂರಲ್ಲೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಅತ್ತೆ, ಮಾವ ಮನೆಯಿಂದ ಹೊರಹಾಕಿದ್ದಕ್ಕೆ ಕಳೆದ 20 ದಿನದಿಂದ ಮನೆಯ ಹೊರಗೆ ಮಹಿಳೆಯೊಬ್ಬರು ಬದುಕು ನಡೆಸುತ್ತಿರುವ ಘಟನೆ ಯಶವಂತಪುರದ ಬಾಬಾಸಾಹೇಬರಪಾಳ್ಯದಲ್ಲಿ ಜರುಗಿದೆ.
ಅತ್ತೆ- ಮಾವ ಸೇರಿ, ಸೊಸೆಯನ್ನೇ ಮನೆಯಿಂದ ಹೊರಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಪೂಜಾ ಹಾಗೂ ರಾಘವೇಂದ್ರ ಎಂಬುವವರು 7 ವರ್ಷದ ಹಿಂದೆ ಮದುವೆಯಾಗಿದ್ದರು. ರಾಘವೇಂದ್ರ ಅವರಿಗೆ ಮೊದ್ಲಿನಿಂದಲೂ ಆರೋಗ್ಯ ಸಮಸ್ಯೆ ಇತ್ತು. ಆದರೆ ಇದನ್ನು ಪೂಜಾ ಕುಟುಂಬಕ್ಕೆ ತಿಳಸದೇ ಹಾಗೇ ಮದುವೆ ಮಾಡಿಸಿಕೊಟ್ಟಿದ್ದರು. ಹೀಗಾಗಿ ಮೂರು ತಿಂಗಳ ಹಿಂದೆ ರಾಘವೇಂದ್ರ ಮೃತಪಟ್ಟಿದ್ದರು. ಅದಾದ ಬಳಿಕ ಪೂಜಾ ಅವರನ್ನ ಅತ್ತೆ- ಮಾವ ಹಾಗೂ ನಾದಿನಿ ಸೇರಿಕೊಂಡು ಮನೆಯಿಂದ ಬಲವಂತವಾಗಿ ಹೊರತಳ್ಳಿ, ಮನೆಯನ್ನು ಲಾಕ್ ಮಾಡಿದ್ದಾರೆ.
ಇದೀಗ ಅತ್ತೆ- ಮಾವ ಮಗಳ ಮನೆಯಲ್ಲಿದ್ದು, ತಮ್ಮ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸೊಸೆ ಮಾತ್ರ ಇದು ಗಂಡನ ಮನೆ ಅಂತ ಕಳೆದ 20 ದಿನಗಳಿಂದ ಮನೆಯ ಆವರಣದಲ್ಲಿ ಪುಟ್ಟ ಸಿಲಿಂಡರ್, ಸಣ್ಣಪುಟ್ಟ ಪಾತ್ರೆ ಇಟ್ಕೊಂಡು ಬದುಕು ನಡೆಸ್ತಿದ್ದಾರೆ. ವಾರಕ್ಕೊಮ್ಮೆ ಸ್ನಾನ ಮಾಡ್ತಿದ್ದು, ಅಕ್ಕಪಕ್ಕದ ಮನೆಯವ್ರ ಶೌಚಾಲಯವನ್ನೇ ಬಳಸ್ತಿದ್ದಾರೆ. ಗಂಡ ಸತ್ತ ಮೇಲೆ ನಿನ್ನ ಅವಶ್ಯಕತೆಯಿಲ್ಲ ಇಲ್ಲಿಂದ ತೊಲಗು ಎಂದು ಪೂಜಾಗೆ, ಮಾವ ಶ್ರೀನಿವಾಸ್ ಹಾಗೂ ಅತ್ತೆ ಶಾಂತಮ್ಮ ಕಿರುಕುಳ ನೀಡಿದ್ದಾರೆ ಅಂತ ಕಣ್ಣೀರು ಹಾಕ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






