ಕೇವಲ ವಿಮೆ ಹಣಕ್ಕಾಗಿ ಮಗನ ಕೊಂದು ಹೆದ್ದಾರಿಯಲ್ಲಿ ಶವ ಎಸೆದ ತಾಯಿ!
ಉತ್ತರ ಪ್ರದೇಶ: ತಾಯಿಯೇ ತನ್ನ ಪ್ರಿಯಕರನ ಸಹಾಯದಿಂದ ಮಗನನ್ನು ಕೊಲೆ ಮಾಡಿಸಿದ ಘಟನೆ ಕಾನ್ಪುರ ದೇಹತ್ ಜಿಲ್ಲೆಯ ಅಂಗದ್ಪುರ್ ಬರೌರ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಹತ್ಯೆಗೆ 33 ಲಕ್ಷ ರೂಪಾಯಿ ವಿಮೆ ಹಣ ಮತ್ತು ಅಕ್ರಮ ಸಂಬಂಧವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ನಿವಾಸಿ 23 ವರ್ಷದ ಪ್ರದೀಪ್ ಶರ್ಮಾ ಶವ ಅಕ್ಟೋಬರ್ 27ರಂದು ಔರೈಯಾ–ಕಾನ್ಪುರ ಹೆದ್ದಾರಿಯ ಬದಿಯಲ್ಲಿ ಪತ್ತೆಯಾಯಿತು. ಪ್ರಾರಂಭದಲ್ಲಿ ಇದು ರಸ್ತೆ ಅಪಘಾತವೆಂದು ತೋರಿದರೂ, ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಯುವಕನನ್ನು ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಯಿತು. ಪ್ರದೀಪ್ ಅಜ್ಜ ಜಗದೀಶ್ ನಾರಾಯಣ್ ರಿಷಿ ಕಟಿಯಾರ್ ಅಲಿಯಾಸ್ ರೇಶು ಮತ್ತು ಅವನ ಸಹೋದರ ಮಾಯಾಂಕ್ ಅಲಿಯಾಸ್ ಮನೀಷ್ ವಿರುದ್ಧ ದೂರು ದಾಖಲಿಸಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದರು. ಮಂಗಳವಾರ ರಾತ್ರಿ ನಿಗೋಹಿಯ ದೂರ್ವಶ ಆಶ್ರಮದ ಬಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಎನ್ಕೌಂಟರ್ ವೇಳೆ ಬಂಧಿಸಿದರು. ಈ ವೇಳೆ ರಿಷಿ ಕಟಿಯಾರ್ ಕಾಲಿಗೆ ಗುಂಡು ತಗುಲಿತು.
ವಿಚಾರಣೆ ವೇಳೆ ಇಬ್ಬರೂ ನೀಡಿದ ಹೇಳಿಕೆ ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿತು. ಪ್ರದೀಪ್ನ ತಾಯಿ ಮಮತಾ, ಮನೀಷ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಸಂಬಂಧವನ್ನು ಪ್ರದೀಪ್ ವಿರೋಧಿಸಿದ್ದ ಕಾರಣ, ಆಕೆ ಕೋಪಗೊಂಡಿದ್ದಳು.
ಇದಕ್ಕೂ ಸೇರೆ ಪ್ರದೀಪ್ ಹೆಸರಿನಲ್ಲಿ ನಾಲ್ಕು ವಿಮಾ ಪಾಲಿಸಿಗಳು (ಒಟ್ಟು 33 ಲಕ್ಷ ರೂ. ಮೌಲ್ಯ) ಇದ್ದವು. ವಿಮೆ ಹಣದ ದುರಾಸೆಯಿಂದ ಪ್ರೇರಿತಳಾದ ಮಮತಾ, ತನ್ನ ಗೆಳೆಯ ಮನೀಷ್ ಜೊತೆ ಸೇರಿ ಮಗನ ಕೊಲೆ ಮಾಡಲು ಯೋಜನೆ ರೂಪಿಸಿದ್ದಳು. ಅಕ್ಟೋಬರ್ 27ರಂದು ಮನೀಷ್ ಹಾಗೂ ರಿಷಿ, ಪ್ರದೀಪ್ರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಂದ ಬಳಿಕ, ಶವವನ್ನು ಔರೈಯಾ–ಕಾನ್ಪುರ ಹೆದ್ದಾರಿಯ ಬಳಿ ಎಸೆದು ಅಪಘಾತದಂತೆ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಆರೋಪಿಗಳ ವಿರುದ್ಧ ಅಪಹರಣ, ಕೊಲೆ ಹಾಗೂ ಸಂಚು ರೂಪಿಸುವ ಆರೋಪದಡಿ ಪ್ರಕರಣ ದಾಖಲಾಗಿದೆ. ಎಎಸ್ಪಿ ರಾಜೇಶ್ ಪಾಂಡೆ ಅವರು, “ರಿಷಿ ಕಟಿಯಾರ್ ವಿರುದ್ಧ ಝಾನ್ಸಿ ಮತ್ತು ಬರೌರ್ನಲ್ಲಿ ಹಲವು ಅಪರಾಧ ಪ್ರಕರಣಗಳು ಈಗಾಗಲೇ ದಾಖಲಾಗಿವೆ” ಎಂದು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?