ಕೋರ್ಟ್ ಆದೇಶ ಕೊಟ್ಟರೂ ದರ್ಶನ್ʼಗೆ ಜೈಲಲ್ಲಿ ಸಿಗುತ್ತಿಲ್ಲ ಸೌಲಭ್ಯ! ಮತ್ತೆ ಅರ್ಜಿ ಸಲ್ಲಿಸಿದ ವಕೀಲರು
ಬೆಂಗಳೂರು: ನಟ ದರ್ಶನ್ ಅವರಿಗೆ ಜೈಲಿನಲ್ಲಿ ಹಾಸಿಗೆ, ದಿಂಬು, ಬೆಡ್ಶೀಟ್ ನೀಡುವಂತೆ ಕೆಳ ಹಂತದ ಕೋರ್ಟ್ ಆದೇಶ ನೀಡಿದ್ದರೂ, ಇದಕ್ಕೆ ಅವಕಾಶ ಸಿಗುತ್ತಿಲ್ಲ ಎಂದು ದರ್ಶನ್ ಅವರು ಮತ್ತೆ ಕೋರ್ಟ್ ಮೊರೆ ಹೋಗಿದ್ದಾರೆ. ಹಿಂದಿನ ಸ್ಥಿತಿಯೇ ಮುಂದುವರಿದಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆಗಿ, ಮೊದಲಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲ್ಪಟ್ಟಿದ್ದರು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಯಿತು. ಅಲ್ಲಿರುವಾಗ ಜಾಮೀನು ಸಿಕ್ಕಿತ್ತು. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಮಾಡಿ, ಹೆಚ್ಚುವರಿ ಸೌಲಭ್ಯ ನೀಡಬಾರದು ಎಂದು ಎಚ್ಚರಿಸಿತ್ತು.
ಇದಾದ ಬಳಿಕ ದರ್ಶನ್ ಅವರು ಹಾಸಿಗೆ, ದಿಂಬು ಹಾಗೂ ಬೆಡ್ಶೀಟ್ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ಕೋರ್ಟ್ ಆವರಣದಲ್ಲಿ ವಾಕಿಂಗ್ಗೆ ಅವಕಾಶ ಕೋರಿದ್ದರು. ಬೆಳಿಗ್ಗೆ ಮತ್ತು ಸಂಜೆ ಅರ್ಧ ಗಂಟೆ ವಾಕಿಂಗ್ ಮಾತ್ರ ಸಿಗುತ್ತಿದೆ. ಆದರೆ ಬೇರೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಪರ ವಕೀಲರು ಆರೋಪಿಸಿದ್ದಾರೆ.
“ಕೋರ್ಟ್ ಆದೇಶವನ್ನು ಅಧಿಕಾರಿಗಳು ಕಡೆಗಣಿಸಿದ್ದಾರೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ದರ್ಶನ್ ಪರ ವಕೀಲರು ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?