ದ್ರಾವಿಡ್ ಸ್ಥಾನಕ್ಕೆ ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಆಗಿ ಕುಮಾರ್ ಸಂಗಕ್ಕಾರ ನೇಮಕ!
ಜೈಪುರ: ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ್ ಸಂಗಕ್ಕಾರ ಮತ್ತೆ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್ ಆಗಿ ಮರಳಲು ಸಿದ್ಧರಾಗಿದ್ದಾರೆ. 2021ರಿಂದ ರಾಜಸ್ಥಾನ ರಾಯಲ್ಸ್ ತಂಡದ ನಿರ್ದೇಶಕ ಹಾಗೂ ಕೋಚ್ ಆಗಿದ್ದ ಸಂಗಕ್ಕಾರ, 2022ರಲ್ಲಿ ತಂಡವನ್ನು ಐಪಿಎಲ್ ಫೈನಲ್‌ಗೆ ತಲುಪಿಸಿದ್ದರು. ಆದರೆ 2024ರಲ್ಲಿ ರಾಹುಲ್ ದ್ರಾವಿಡ್ ತಂಡದ ಕೋಚ್ ಆಗಿ ಬಂದ ಕಾರಣ ಅವರು ಸ್ಥಾನ ತೊರೆದಿದ್ದರು. ಈಗ ಮತ್ತೊಮ್ಮೆ ತಂಡವನ್ನು ಮುನ್ನಡೆಸಲು ಸಂಗಕ್ಕಾರರನ್ನು ಫ್ರಾಂಚೈಸಿ ಸಂಪರ್ಕಿಸಿದೆ.
ರಾಹುಲ್ ದ್ರಾವಿಡ್ 2024ರಲ್ಲಿ ಟೀಂ ಇಂಡಿಯಾವನ್ನು ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿಸಿದ ನಂತರ ರಾಜಸ್ಥಾನ ರಾಯಲ್ಸ್ ಕೋಚ್ ಆಗಿ ನೇಮಕಗೊಂಡಿದ್ದರು. ಆದರೆ ಕಳೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ತಂಡ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದು, ಒಂಬತ್ತನೇ ಸ್ಥಾನದಲ್ಲಿ ಮುಗಿಸಿತ್ತು. 2008ರಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಬಳಿಕ ರಾಜಸ್ಥಾನ ರಾಯಲ್ಸ್ ಮತ್ತೊಮ್ಮೆ ಕಪ್ ಗೆಲ್ಲಲು ವಿಫಲವಾಗಿದೆ.
ಸಂಜು ಸ್ಯಾಮ್ಸನ್ ತಂಡದಿಂದ ಬಿಡುಗಡೆ ಮಾಡುವಂತೆ ಕೋರಿದ ನಂತರ, ಆರ್‌ಆರ್‌ಗೆ ಮುಂದಿನ ನಾಯಕ ಯಾರು ಎಂಬುದನ್ನು ನಿರ್ಧರಿಸುವುದು ಸಂಗಕ್ಕಾರ ಅವರ ಮುಂದಿರುವ ದೊಡ್ಡ ಕೆಲಸವಾಗಿದೆ. ತಂಡವು ವಿಕ್ರಮ್ ರಾಥೋಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಮುಂದುವರಿಸಲಿದ್ದು, ಶೇನ್ ಬಾಂಡ್ ಬೌಲಿಂಗ್ ಕೋಚ್ ಆಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ವರದಿ ಹೇಳುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?