AICC OBC ಸಲಹಾ ಮಂಡಳಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ! ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿಯಾಗ್ತಾರಾ ಸಿಎಂ..?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಐಸಿಸಿ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಅವರನ್ನು ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ನೇಮಕಾತಿಯ ಮೂಲಕ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವ ಬೀರುವತ್ತ ಹೆಜ್ಜೆ ಹಾಕಿದ್ದಾರೆ.
ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು, ಈ ವೇಳೆ ಈ ಸಲಹಾ ಮಂಡಳಿ ಅಸ್ತಿತ್ವಕ್ಕೆ ಬರುವಂತೆ ರೂಪು ಪಡೆದಿತ್ತು. ಈಗ ಇದರ ಮೊದಲ ಸಭೆ ಜುಲೈ 15ರಂದು ಬೆಂಗಳೂರುನಲ್ಲಿ ನಡೆಯಲಿದ್ದು, ಹಿಂದುಳಿದ ವರ್ಗಗಳ ಸಮಸ್ಯೆಗಳ ಕುರಿತು ಮಹತ್ವದ ಚರ್ಚೆಗಳು ನಡೆಯಲಿವೆ.
ಸದ್ಯ ಎಐಸಿಸಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ಸಿದ್ದರಾಮಯ್ಯರನ್ನ ನೇಮಕ ಮಾಡಲಾಗಿದೆ. ಮಂಡಳಿಯ ಚಟುವಟಿಕೆಗಳನ್ನು ಕರ್ನಾಟಕದಿಂದಲೇ ಆರಂಭಿಸಲು ಎಐಸಿಸಿ ನಿರ್ಧರಿಸಿದ್ದು, ಇದೇ ಜುಲೈ 15ರಂದು ಬೆಂಗಳೂರಿನಲ್ಲಿ ಮೊದಲ ಸಭೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ (KPCC) ಕಚೇರಿ ಆವರಣದಲ್ಲಿನ ಭಾರತ್ ಜೋಡೊ ಭವನದಲ್ಲಿ ಮಂಡಳಿಯ ಮೊದಲ ಸಭೆ ನಡೆಯಲಿದೆ.
ಮಂಡಳಿಯ ಸದಸ್ಯರು, ಸಂಚಾಲಕರು, ಕಾರ್ಯದರ್ಶಿಗಳು, ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಸೇರಿದಂತೆ ದೇಶದ ವಿವಿಧ ರಾಜ್ಯಗಳ 90 ನಾಯಕರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಈ ಪೈಕಿ ಐವರು ಮಾಜಿ ಸಿಎಂಗಳು, 10 ಮಂದಿ ಕೇಂದ್ರದ ಮಾಜಿ ಸಚಿವರೂ ಸಹ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಸಲಹಾ ಮಂಡಳಿ ಏನು ಮಾಡಲಿದೆ?
ರಾಷ್ಟ್ರಮಟ್ಟದ ಯೋಜನೆಗಳಿಗೆ ರೂಪುರೇಷೆ ನೀಡುವ ಸಲಹಾ ಮಂಡಳಿ
ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ
ಎಐಸಿಸಿಗೆ ನವೀನ ಕಾರ್ಯತಂತ್ರಗಳ ಸಲಹೆ, ಅನುಷ್ಠಾನದ ಪ್ರಸ್ತಾವನೆ
ಹಿಂದುಳಿದ ವರ್ಗಗಳಿಗಾಗಿ ಕಾಂಗ್ರೆಸ್ ಕೈಗೆತ್ತಿಕೊಳ್ಳಬೇಕಾದ ನೀತಿಯ ಬಗ್ಗೆ ಮಾರ್ಗದರ್ಶನ
ಅಭಿವೃದ್ದಿ, ಸಮಾವೇಶ ಹಾಗೂ ನೈತಿಕ ಪ್ರತಿನಿಧನದ ಕುರಿತು ಶಿಫಾರಸು
ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಸಿದ್ದರಾಮಯ್ಯ?
ಈ ಜವಾಬ್ದಾರಿ ಮೂಲಕ ಸಿದ್ದರಾಮಯ್ಯ ಅವರು ರಾಷ್ಟ್ರಮಟ್ಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೋರಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಏಕೆಂದರೆ ಈ ಮಂಡಳಿಯಲ್ಲಿ ಅವರ ಜೊತೆಗೆ ಹಾಜರಿರುವವರು – ಎಂ. ವೀರಪ್ಪ ಮೊಯಿಲಿ, ಬಿ.ಕೆ. ಹರಿಪ್ರಸಾದ್ ಮುಂತಾದವರು – ರಾಷ್ಟ್ರ ರಾಜಕೀಯದಲ್ಲೇ ಗಂಭೀರ ಪಾತ್ರವಹಿಸಿದ್ದವರು.
ನಿಮ್ಮ ಪ್ರತಿಕ್ರಿಯೆ ಏನು?






