Anna Bhagya Scheme: 5KG ಅಕ್ಕಿ ಬದಲಿಗೆ ನೀಡುವ ಇಂದಿರಾ ಕಿಟ್ʼನಲ್ಲಿ ಏನೇನಿರುತ್ತೆ..?
ಬೆಂಗಳೂರು: ಕರ್ನಾಟಕ ಸರ್ಕಾರ ತನ್ನ ಉಚಿತ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಅನ್ನಭಾಗ್ಯ ಫಲಾನುಭವಿಗಳಿಗೆ ಇಂದಿರಾ ಆಹಾರ ಕಿಟ್ ಮೂಲಕ ಪೌಷ್ಟಿಕ ಆಹಾರ ವಿತರಿಸಲಾಗುವುದು ಎಂದು ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನವಾಗಿದೆ.
5 ಕೆಜಿ ಅಕ್ಕಿಯ ಜೊತೆಗೆ 2 ಕೆಜಿ ತೊಗರಿಬೇಳೆ, 1 ಕೆಜಿ ಉಪ್ಪು, 1 ಕೆಜಿ ಸಕ್ಕರೆ ಮತ್ತು 1 ಕೆಜಿ ಅಡುಗೆ ಎಣ್ಣೆ ನೀಡಲಾಗುವುದು. ಹೀಗಾಗಿ ಈ ಕಿಟ್ ಮೂಲಕ ಜನರಿಗೆ ಒಟ್ಟು 10 ಕೆಜಿ ಪದಾರ್ಥಗಳನ್ನು ಪೂರೈಸಲಾಗುತ್ತದೆ.
ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆಜೆ ಅಕ್ಕಿಯನ್ನು ಸೇರಿಸಿ ಒಟ್ಟು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮುಂಚೆ ಅಕ್ಕಿಯ ಅಭಾವ ಹಿನ್ನಲೆ ಫಲಾನುಭವಿಗಳ ಖಾತೆಗೆ 175 ರೂ ಜಮಾ ಮಾಡಲಾಗುತ್ತಿತ್ತು.
ಅಕ್ಕಿಯ ದರ ಇಳಿಕೆ ಆದ ಬಳಿಕ ಕಳೆದ ಕೆಲ ತಿಂಗಳಿನಿಂದ ಮತ್ತೆ ಹಣದ ಬದಲಾಗಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಇದೀಗ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇಂದಿರಾ ಕಿಟ್ನಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ಸಂಪುಟ ಸಭೆಯಲ್ಲಿ ಕೈಗೊಂಡ ಇತರೆ ಪ್ರಮುಖ ನಿರ್ಧಾರಗಳು
- 2025-26ನೇ ಸಾಲಿನ ರಸಗೊಬ್ಬರ ದಾಸ್ತಾನಿಗೆ 200 ಕೋಟಿ ರೂ. ಸಾಲಕ್ಕೆ ಬಂಡವಾಳ ಖಾತ್ರಿ ನೀಡುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಜಲಾನಯನ ಅಭಿವೃದ್ಧಿ ಘಟಕ, ಪ್ರಧಾನಮಂತ್ರಿ ಕೃಷಿ ಸಿಂಚಯಿ ಹೆಚ್ಚುವರಿ 15 ಯೋಜನೆಗಳು 15 ತಾಲೂಕುಗಳಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
- ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳನ್ನು ಸಡಿಲಿಸಿ ದಿನಾಂಕ: 29.09.2025 ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ದೊರೆತಿದೆ.
- 5ನೇ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು ವಿಸ್ತರಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ ನವೆಂಬರ್ ತನಕ ಅವಧಿ ವಿಸ್ತರಣೆ.
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎರಡನೇ ಹಂತದಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು ರೂ.405.55 ಕೋಟಿ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?