Asia Cup 2025: ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್!
ನವದೆಹಲಿ: ದುಬೈನಲ್ಲಿ ನಡೆಯಲಿರುವ ಏಷ್ಯಾಕಪ್ ಟಿ20 ಟೂರ್ನಮೆಂಟ್ನ ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಲು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸೆಪ್ಟೆಂಬರ್ 14 ರಂದು ನಡೆಯಲಿರುವ ಈ ಪಂದ್ಯವನ್ನು ತಡೆಯಲು ಸಲ್ಲಿಸಿದ ಅರ್ಜಿಯನ್ನು ತಕ್ಷಣ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಅವರ ಪೀಠ ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದನ್ನು ತಳ್ಳಿಹಾಕಿ, “ಇದು ಕೇವಲ ಒಂದು ಪಂದ್ಯ, ಆತುರ ಏನಿದೆ? ನಡೆಯಲಿ ಬಿಡಿ” ಎಂದು ಹೇಳಿದ್ದಾರೆ.
ಅರ್ಜಿದಾರರು ಪಂದ್ಯವು ಸಮೀಪದಲ್ಲೇ ಇರುವುದರಿಂದ ತಕ್ಷಣ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದರೂ, ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಉರ್ವಶಿ ಜೈನ್ ನೇತೃತ್ವದ ನಾಲ್ವರು ಕಾನೂನು ವಿದ್ಯಾರ್ಥಿಗಳು ಈ ಪಿಐಎಲ್ ಸಲ್ಲಿಸಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್ ಸಿಂಧೂರ್ನಲ್ಲಿ ಭಾರತೀಯ ಸೈನಿಕರು ಮತ್ತು ನಾಗರಿಕರು ಬಲಿಯಾದ ಹಿನ್ನೆಲೆ, ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯ ಆಯೋಜಿಸುವುದು ರಾಷ್ಟ್ರೀಯ ಘನತೆಗೆ ಹಾನಿ ಮಾಡುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಆದರೆ ಸುಪ್ರೀಂ ಕೋರ್ಟ್ ತನ್ನ ನಿರ್ಧಾರದಲ್ಲಿ ಸ್ಪಷ್ಟವಾಗಿ ಪಂದ್ಯ ನಡೆಯಲು ಅವಕಾಶ ನೀಡಿದೆ. ಇದರೊಂದಿಗೆ ಭಾರತ–ಪಾಕಿಸ್ತಾನ ನಡುವೆ ನಡೆಯಲಿರುವ ಹೈ ವೋಲ್ಟೇಜ್ ಪಂದ್ಯಕ್ಕೆ ಕಾನೂನು ಅಡೆತಡೆ ದೂರವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?