Bengaluru: ತಿಗಣೆ ಔಷಧಿ ವಾಸನೆಗೆ ಬಿಟೆಕ್ ವಿದ್ಯಾರ್ಥಿ ಸಾವು! 

ಅಕ್ಟೋಬರ್ 22, 2025 - 22:01
 0  10
Bengaluru: ತಿಗಣೆ ಔಷಧಿ ವಾಸನೆಗೆ ಬಿಟೆಕ್ ವಿದ್ಯಾರ್ಥಿ ಸಾವು! 

ಬೆಂಗಳೂರು: ಬೆಂಗಳೂರಿನ HAL ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರಂತ ಘಟನೆಯಲ್ಲಿ, ತಿಗಣೆ ಔಷಧಿ ವಾಸನೆಗೆ ಬಿಟೆಕ್‌ ವಿದ್ಯಾರ್ಥಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಗಣೆ ಔಷಧಿ ವಾಸನೆಯಿಂದ ಪವನ್​​ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ವಿದ್ಯಾರ್ಥಿ ಪವನ್ ಆಂಧ್ರದ ತಿರುಪತಿ ಮೂಲದವನು ಎಂದು ತಿಳಿದುಬಂದಿದೆ. ಪಿಜಿಯಲ್ಲಿ ಗಣೆ ಔಷಧಿ ಸಿಂಪಡಿಸಿದ್ದರಿಂದ ಅದರ ತೀವ್ರ ವಾಸನೆ ಉಸಿರುಗಟ್ಟುವಿಕೆಗೆ ಕಾರಣವಾಗಿ, ವಿದ್ಯಾರ್ಥಿಯ ಜೀವಕ್ಕೆ ಗಂಡಾಂತರ ತಂದಿದೆ.

ಆಂಧ್ರ ಪ್ರದೇಶದ ತಿರುಪತಿಯ ನಿವಾಸಿಯಾದ ಪವನ್, ಕಳೆದ ಮೂರು ತಿಂಗಳಿಂದ ಅಶ್ವತ್ ನಗರದ ಬಿಎಂಆರ್ ಪಿ.ಜಿ.ಯೊಂದರಲ್ಲಿ ನೆಲೆಸಿದ್ದರು. ನಗರದ ಐಟಿ ಕಂಪನಿಗಳಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ಊರಿಗೆ ತೆರಳಿದ್ದರು.

ಪಿ.ಜಿಯಲ್ಲಿ ತಿಗಣೆ ಸಮಸ್ಯೆ ಹೆಚ್ಚಾಗಿದ್ದರಿಂದ ಔಷಧಿ ಸಿಂಪಡಿಸಲು ಪಿ.ಜಿ.ಮಾಲೀಕರು ಪವನ್ ಉಳಿದುಕೊಂಡಿದ್ದ ಕೊಠಡಿಯ ಮಾಸ್ಟರ್ ಕೀ ಬಳಸಿ ರೂಮಿಗೆ ಹೋಗಿ ಔಷಧಿ ಸಿಂಪಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಊರಿಗೆ ಹೋಗಿದ್ದ ಪವನ್ ಅ.19ರಂದು ಪಿಜಿಗೆ ವಾಪಸ್ ಆಗಿದ್ದರು. ಎಂದಿನಂತೆ ರಾತ್ರಿ ಮಲಗಿದ್ದು, ಮಾರನೇ ದಿನ ಬೆಳಗ್ಗೆ ಅಸ್ವಸ್ಥಗೊಂಡಿದ್ದರು. ವಿಷಯ ತಿಳಿದು ಕೂಡಲೇ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪವನ್ ಸಾವಿನ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.

ತಿಗಣೆ ನಿಯಂತ್ರಣಕ್ಕಾಗಿ ಬಳಸುವ ರಾಸಾಯನಿಕಯುಕ್ತ ಔಷಧಿಗಳ ಅತಿಯಾದ ಬಳಕೆ ಅಥವಾ ವಾತಾಯನವಿಲ್ಲದ ಸ್ಥಳದಲ್ಲಿ ಸಿಂಪಡಿಸುವುದು ಎಷ್ಟೊಂದು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ. ಇಂತಹ ರಾಸಾಯನಿಕಗಳನ್ನು ಬಳಸುವಾಗ ಅತ್ಯಂತ ಎಚ್ಚರಿಕೆ ವಹಿಸುವ ಅಗತ್ಯತೆಯನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow